ತಿರುವನಂತಪುರ, ಅ 17 (MSP): ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದ್ದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಳಿಕ ಇದೇ ಮೊದಲ ಬಾರಿಗೆ ಹಾಗೂ ಕೋಟ್ಯಾಂತರ ಅಯ್ಯಪ್ಪ ಭಕ್ತರು ಹಾಗೂ ಕೇರಳ ಸರ್ಕಾರದ ನಡುವಿನ ಹಗ್ಗಜಗ್ಗಾಟದ ನಡುವೆಯೇ ಬುಧವಾರ ಶಬರಿ ಮಲೆ ಅಯ್ಯಪ್ಪ ದೇವಸ್ಥಾನದ ಮಾಸಿಕ ದರ್ಶನ ಆರಂಭವಾಗುತ್ತಿದೆ.
ಆದರೆ ಇಡೀ ಕೇರಳದಲ್ಲಿ "ಬೂದಿಮುಚ್ಚಿದ ಕೆಂಡ'ದಂತಹ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಪರಿಸ್ಥಿತಿಯಲ್ಲೂ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆ ಪ್ರವೇಶಕ್ಕೆ ಅವಕಾಶ ಮಾಡಿ ಕೊಡುವುದಿಲ್ಲ ಎಂದು ಪ್ರತಿಭಟನಕಾರರು ಶಬರಿಮಲೆ ದೇಗುಲದ ಕೆಳಗಿರುವ ನಿಳಕ್ಕಲ್ನಲ್ಲಿ ಭದ್ರಕೋಟೆ ನಿರ್ಮಿಸಿಕೊಂಡು ಕುಳಿತಿದ್ದಾರೆ. ದೇಗುಲಕ್ಕೆ ಸ್ತ್ರೀಯರ ಪ್ರವೇಶ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಂಘಟನೆಗಳೇ ದೇಗುಲವನ್ನು ಕಾಯಲೆಂದು ತಮ್ಮ ಕಾರ್ಯಕರ್ತರನ್ನು ಕಳುಹಿಸಿಕೊಟ್ಟಿದೆ.
ಈಗಾಗಲೇ ಶಬರಿಮಲೆಯತ್ತ ಮಹಿಳಾ ಭಕ್ತರು ಆಗಮಿಸುತ್ತಿದ್ದ ಇವರನ್ನು ಶಬರಿಮಲೆ ಪ್ರಾಥಮಿಕ ಶಿಬಿರ ಹಾಗೂ ಪಂಬನ್ ಭಾಗದಲ್ಲಿ ತಡೆಯಲಾಗುತ್ತಿದೆ. ಬಸ್ ಕಾರುಗಳನ್ನು ನಿಲ್ಲಿಸಿ ತಪಾಸಣೆ ಮಾಡಿ ಅದರಲ್ಲಿರುವ ಮಹಿಳೆಯರನ್ನು ಕೆಳಕ್ಕಿಳಿಸಿ ವಾಪಾಸ್ ಕಳುಹಿಸಲಾಗುತ್ತಿದೆ. ಪೊಲೀಸರ ಎಚ್ಚರಿಕೆಗೂ ಮಣಿಯದ ಬುಡಕಟ್ಟು ವಾಸಿಗಳು ಹಾಗೂ ಮಹಿಳಾ ಭಕ್ತರ ಪಡೆ ಈ ಕಾರ್ಯ ಮಾಡುತ್ತಿದೆ.
ಇದೆಲ್ಲದರ ಮದ್ಯೆ ಕೇರಳ ಸಿಎಂ ಪಿಣರಾಯಿ ವಿಜಯನ್ ನ್ಯಾಯಾಲಯದ ತೀರ್ಪು ಪಾಲಿಸಲು ಸರ್ಕಾರ ಬದ್ದವಾಗಿದೆ. ಭಕ್ತರ ನಂಬಿಕೆಗೆ ಧಕ್ಕೆ ತರುವ ಕೆಲಸ ಕೆಲವು ಸಂಘಟನೆಗಳಿಂದ ನಡೆಯುತ್ತಿದ್ದು ಇದಕ್ಕೆ ಅಸ್ಪದ ನೀಡುವುದಿಲ್ಲ. ಯಾವುದೇ ಭಯವಿಲ್ಲದೆ ಅಯ್ಯಪ್ಪನ ದರ್ಶನ ಮಾಡಿಸಲು ಸರ್ಕಾರ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.