ಮಂಗಳೂರು, ಅ 9: ಕೊಳಚೆ ನೀರನ್ನು ತೆರೆದ ಪ್ರದೇಶಗಳಿಗೆ ಹರಿಯ ಬಿಡುತ್ತಾರೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆ ಮೇಯರ್ ಕವಿತಾ ಸನಿಲ್ ಮೇರಿಹಿಲ್ ಸಮೀಪದ ಪಿಂಟೋ ಗಾರ್ಡನ್ ನಲ್ಲಿರುವ ವೆಲಂಕನಿ ಎಬೋಡ್ ವಸತಿ ಸಮುಚ್ಚಯಕ್ಕೆಹಠಾತ್ ದಾಳಿ ನಡೆಸಿದರು.
ವೆಲಾಂಕನಿ ಎಬೋಡ್ ವಸತಿ ಸಮುಚ್ಚಯದಿಂದ ಕೊಳಚೆ ನೀರು ಸುತ್ತಮುತ್ತಲಿನ ಪ್ರದೇಶಗಳಿಗೆ ಹರಿಯುತ್ತಿದ್ದು, ಜನರಿಗೆ ಸಮಸ್ಯೆಯಾಗುತ್ತಿತ್ತು. ಮಾತ್ರವಲ್ಲದೆ, ಕೊಳಚೆ ನೀರು ಎಲ್ಲೆಂದರಲ್ಲಿ ಹರಿದು ಪರಿಸರ ದುರ್ನಾತ ಬೀರುತ್ತಿತ್ತು. ಇದರಿಂದ ಆಕ್ರೋಶಿತಗೊಂಡ ಸ್ಥಳೀಯರು ಮೇಯರ್ ಕವಿತಾ ಸನಿಲ್ ಅವರಿಗೆ ಲಿಖಿತ ದೂರು ನೀಡಿದ್ದರು. ದೂರು ಪರಿಶೀಲಿಸಿದ ಮೇಯರ್ ಇಂದು ಹಠಾತ್ ವಸತಿ ಸಮುಚ್ಚಯಕ್ಕೆ ದಾಳಿ ನಡೆಸಿದ್ದು, ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ.
ವೆಲಂಕನಿ ಎಬೋಡ್ ವಸತಿ ಸಮುಚ್ಚಯಕ್ಕೆ ದಾಳಿ ನಡೆಸಿದ ಸಂದರ್ಭ ಇನ್ನೂ ಹಲವಾರು ವಿಚಾರಗಳು ಬೆಳಕಿಗೆ ಬಂದಿದೆ. ಈ ವಸತಿ ಸಮುಚ್ಚಯವು ಯಾವುದೇ ಅಧಿಕೃತ ದಾಖಲೆಗಳು ಇಲ್ಲದೆ ನೀರು ಮತ್ತು ವಿದ್ಯುತ್ ಉಪಯೋಗಿಸುತ್ತಿರುವುದು ಮೇಯರ್ ಗಮನಕ್ಕೆ ಬಂದಿದೆ.
ಕಾನೂನು ನಿಯಮ ಮೀರಿ ಸುತ್ತಮುತ್ತಲಿನ ಜನರಿಗೆ ತೊಂದರೆ ನೀಡುತ್ತಿರುವ ವಸತಿ ಸಮುಚ್ಚಯದ ಮಾಲಕನನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಮೇಯರ್ ಅಪಾರ್ಟ್ ಮೆಂಟ್ ಗೆ ನೀರು ಸರಬರಾಜಾಗುವ ಪೈಪ್ ತುಂಡರಿಸಿ, ನೀರು ಪೂರೈಕೆಯಾಗುವುದನ್ನು ಸ್ಥಗಿತಗೊಳಿಸಿದ್ದಾರೆ. ಇಷ್ಟೇ ಅಲ್ಲದೇ ಈ ಕೃತ್ಯದಲ್ಲಿ ಪರೋಕ್ಷವಾಗಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.