ಉಡುಪಿ, ಅ 17 (MSP): ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಲಕ್ಷ್ಮೀ ಮಂಟಪವನ್ನು ದೇವಸ್ಥಾನದ ಮಾಜಿ ಆಡಳಿತಾಧಿಕಾರಿಯಾಗಿದ್ದ ಮಹಿಳೆಯೊಬ್ಬರು ಪ್ರವೇಶಿಸುವ ಮೂಲಕ ಇದೀಗ ವಿವಾದಕ್ಕೆ ಕಾರಣರಾಗಿದ್ದಾರೆ. ಅವರು ದೇವಸ್ಥಾನದ ಲಕ್ಷ್ಮೀ ಮಂಟಪವನ್ನು ಪ್ರವೇಶಿಸುವ ಸಿಸಿ ಟಿವಿ ಪೂಟೇಜ್ ಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಉಮಾ ಅವರು ಈ ನವರಾತ್ರಿಯ ಸಂದರ್ಭ ಲಕ್ಷ್ಮೀ ಮಂಟಪ ಪ್ರವೇಶ ಮಾಡಿದ್ದಾರೆ. ಉಮಾ ಈ ಹಿಂದೆ ಅಧಿಕಾರಿಯಾಗಿದ್ದರು ಎಂಬ ಕಾರಣಕ್ಕೆ ಸುತ್ತಮುತ್ತ ಇದ್ದ ಕೆಲ ಅರ್ಚಕರು ಒಳ ಪ್ರವೇಶಿಸಲು ಅವಕಾಶ ಮಾಡಿದ್ದಾರೆ. ಆದ್ರೆ ಮತ್ತೊಂದು ಗುಂಪು ಇದಕ್ಕೆ ತಗಾದೆ ಎತ್ತಿದೆ. ಅರ್ಚಕರು ಉಮಾ ಅವರನ್ನು ಒಳಗೆ ಬಿಟ್ಟದ್ದು ಸರಿಯಲ್ಲ ಎಂದು ಭಕ್ತರು ದೂರುತ್ತಿದ್ದಾರೆ.
ನವರಾತ್ರಿಯ ಸಂದರ್ಭ ಕೊಲ್ಲೂರಲ್ಲಿ ಮಹಿಳೆಯರಿಗೆ ಬಾಗಿನ ಕೊಡುವ ಸಂಪ್ರದಾಯ ಇದೆ. ನವರಾತ್ರಿ ಮೊದಲ ದಿನ ಒಬ್ಬರಿಗೆ, ಎರಡೇ ದಿನ ಇಬ್ಬರಿಗೆ, 9ನೇ ದಿನ 9 ಮಂದಿ ಗ್ರಾಮದ ಬ್ರಾಹ್ಮಣ ಮಹಿಳೆಯರಿಗೆ ಬಾಗಿನ ನೀಡುವ ಪದ್ದತಿ ಇಲ್ಲಿ ಆಚರಣೆಯಲಿದೆ. ಆ ಸಂದರ್ಭದಲ್ಲಿ ಮಾತ್ರ ಮಹಿಳೆಯರು ಲಕ್ಷ್ಮೀ ಮಂಟಪ ಪ್ರವೇಶಿಸಬಹುದು. ಆದ್ರೆ ವಿವಾದಿತ ಅಧಿಕಾರಿ ಉಮಾ ಅವರು ನವರಾತ್ರಿ ದೇವಸ್ಥಾನ ಭೇಟಿ ಸಂದರ್ಭದಲ್ಲಿ ಒಳ ಪ್ರವೇಶಿಸಿ ಸಂಪ್ರದಾಯಕ್ಕೆ ಅಪಚಾರ ಎಸಗಿದ್ದಾರೆ ಎಂಬುದಾಗಿ ದೇವಸ್ಥಾನದ ಭಕ್ತಾದಿಗಳು ಆರೋಪಿಸಿದ್ದಾರೆ.
ಉಮಾ ಆಡಳಿತಾಧಿಕಾರಿಯಾಗಿದ್ದ ಅವಧಿಯಲ್ಲಿ ದೇವಸ್ಥಾನದಲ್ಲಿ ಅಕ್ರಮ ನಡೆದಿರುವ ಹಾಗೂ ಹರಕೆ ನೀಡಿದ ಚಿನ್ನವನ್ನು ಅಡ ಇಟ್ಟು ದೇವಳದ ಸಿಬ್ಬಂಧಿಗಳು ಗೋಲ್ ಮಾಲ್ ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಇದೀಗ ಉಮಾ ಅವರಿಗೆ ಲಕ್ಷ್ಮೀ ಮಂಟಪ ಪ್ರವೇಶಕ್ಕೆ ಅವಕಾಶ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಆಡಳಿತಾಧಿಕಾರಿಯಾಗಿದ್ದಾಗ ಉಮಾ ಅವರು ಲಕ್ಷ್ಮೀ ಮಂಟಪ ಪ್ರವೇಶಿಸುತ್ತಿದ್ದರು. ಆಗ ಹುದ್ದೆಯ ಗೌರವಕ್ಕಾಗಿ ಈ ಅವಕಾಶ ಕೊಡಲಾಗಿತ್ತು. ಆದರೆ ಈಗ ಪ್ರವೇಶ ಮಾಡುವುದು ಸರಿಯಲ್ಲ ಎಂಬ ಮಾತು ಕೇಳಿಬರುತ್ತಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.