ಮಂಗಳೂರು,ಅ 17 (MSP): ನಗರದ ಬಜಾಲ್ ಸಮೀಪ ಮಹಿಳೆಯೊಬ್ಬರು ಅ.16 ರ ಮಂಗಳವಾರ ಅಚಾನಕ್ ಆಗಿ ಬಾವಿಗೆ ಬಿದ್ದಿದ್ದು ಪೊಲೀಸರು ಹಾಗೂ ಸ್ಥಳೀಯರ ತುರ್ತು ಕಾರ್ಯಾಚರಣೆಯಿಂದ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಪಡೀಲ್ ಸಮೀಪದ ೬೩ ವರ್ಷದ ಸುಂದರಿ ಬದುಕಿ ಬಂದ ಮಹಿಳೆ.
ಮಂಗಳವಾರ ಮಧ್ಯಾಹ್ನ ಸಮಯದಲ್ಲಿ ಸುಂದರಿ ಅವರು ಬಾವಿಯ ಸುತ್ತ ಬೆಳೆದ ಹುಲ್ಲನ್ನು ಕೊಯ್ಯ್ದು ಸ್ವಚ್ಚಗೊಳಿಸುತ್ತಿದ್ದರು. . ಈ ವೇಳೆ ಅಚಾನಕ್ ಆಗಿ 20 ಅಡಿ ಆಳದ ಬಾವಿಗೆ ಬಿದ್ದರು. ನೀರಿಗೆ ಬಿದ್ದು ಮೇಲೆ-ಕೆಳಗೆ ಹೋಗುವಾಗ ಸುಂದರಿ ಅವರಿಗೆ ಅದೃಷ್ಟವಶಾತ್ ನೀರಿನ ಪೈಪ್ ಕೈಗೆ ಸಿಕ್ಕಿದೆ. ಇದನ್ನು ಆಧಾರವಾಗಿಟ್ಟು, ನೀರಿನಿಂದ ಸ್ವಲ್ಪ ಮೇಲೆ ಬಂದು ಕಿರುಚಲಾರಂಭಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಸ್ಥಳೀಯರು ಹಾಗೂ ಅಲ್ಲೇ ಸಾಗರ್ ಪೊಲೀಸ್ ವಾಹನದಲ್ಲಿದ್ದ ಪೊಲೀಸರು ಓಡಿ ಬಂದರು. ತಕ್ಷಣಕ್ಕೆ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಲಾಯಿತು.
ಆದರೆ ಬಳಿಕ ಸ್ಥಳೀಯರು ಹಾಗೂ ಪೊಲೀಸರು ಕುರ್ಚಿ ಸಹಾಯದಿಂದ ಸುಂದರಿ ಅವರ ರಕ್ಷಣೆಗೆ ಮುಂದಾದರು. ಅದರಂತೆ ಕುರ್ಚಿಗೆ ಹಗ್ಗವನ್ನು ಕಟ್ಟಿ ಕೆಳಗಿಳಿಸಿದರು. ಅವರು ಕುರ್ಚಿಯಲ್ಲಿ ಕುಳಿತ ಮೇಲೆ ಮೆಲ್ಲನೆ ಮೇಲೆತ್ತಲಾಯಿತು. ಅವರನ್ನು ರಕ್ಷಿಸಿದ ಬಳಿಕ ಸ್ಥಳೀಯರು ಹಾಗೂ ಸಂಬಂಧಿಕರು ನಿಟ್ಟಿಸಿರು ಬಿಟ್ಟರು. ಅದೃಷ್ಟವಶಾತ್ ಪಾರಾಗಿ ಬಂದ ಸುಂದರಿ ಅವರು ದೇವರ ಕೃಪೆಯಿಂದ ಪಾರಾದೆ ಎಂದು ಭಾವಪರವಶರಾದರು. ಕಾರ್ಯಾಚರಣೆಯಲ್ಲಿ ಪೊಲೀಸ್ ಸಾಗರ್ ವಾಹನದ ರವೀಂದ್ರನಾಥ್ ರೈ, ಭರಣಿ ಬಿ. ಶೆಟ್ಟಿ ಭಾಗವಹಿಸಿದ್ದರು. ಸುಂದರಿ ಅವರನ್ನು ಮೇಲೆತ್ತಿದ್ದ ಬಳಿಕ ಅಗ್ನಿಶಾಮಕದಳ ಆಗಮಿಸಿತು.