ಕೇರಳ, ಅ 17(SM): ಕೇರಳದ ಪ್ರಸಿದ್ಧ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶವನ್ನು ಕಲ್ಪಿಸಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ಎಲ್ಲೆಡೆ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದೆ. ಈ ವಿಚಾರದ ಕುರಿತಂತೆ ಕೇರಳ ಸರಕಾರದ ನಿಲುವನ್ನು ವಿರೋಧಿಸಿ ನಾಳೆ ಕೇರಳದಲ್ಲಿ ಬಂದ್ ಗೆ ಕರೆ ನೀಡಲಾಗಿದೆ. ಶಬರಿಮಲೆ ಸಂರಕ್ಷಣಾ ಸಮಿತಿ ನಾಳೆ 24 ಗಂಟೆಗಳ ಕಾಲ ಕೇರಳದಲ್ಲಿ ಬಂದ್ ಆಚರಿಸಲಿದೆ.
ಸಾಂದರ್ಭಿಕ ಚಿತ್ರ
ಸುಪ್ರೀಂಕೋರ್ಟ್ ಇತ್ತೀಚೆಗಷ್ಟೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಅಯ್ಯಪ್ಪ ಸನ್ನಿಧಿಗೆ ಪ್ರವೇಶ ಕಲ್ಪಿಸಿ ಆದೇಶ ನೀಡಿತ್ತು. ಇದರ ವಿರುದ್ಧ ದೇಶಾದ್ಯಂತ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ಇಂದು ತಿಂಗಳ ಪೂಜೆಯ ನಿಮಿತ್ತ ಶಬರಿಮಲೆ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು ಭಕ್ತರಿಗೆ ಅಯ್ಯಪ್ಪ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆ ಕೇರಳದಲ್ಲಿ ಆಕ್ರೋಶ ತೀವ್ರಗೊಂಡಿದೆ.
ಸನ್ನಿಧಿಯತ್ತ ತೆರಳುವಂತಹ ಮಹಿಳಾ ಭಕ್ತರನ್ನು ತಡೆದ ಪ್ರಸಂಗಗಳು ಕೂಡ ಇಂದು ನಡೆದಿದೆ. ಅಲ್ಲದೆ, ಕೇರಳದ ಹಲವು ಕಡೆಗಳಲ್ಲಿ ಹಿಂಸಾಚಾರ ನಡೆದಿದೆ. ಪೊಲೀಸರ ಮೇಲೆ ಕಲ್ಲು ತೂರಾಟ, ವಾಹನಗಳಿಗೆ ಕಲ್ಲು ತೂರಾಟ, ಪೊಲೀಸ್ ವಾಹನಗಳನ್ನು ಜಖಂ ಮಾಡಲಾಗಿದೆ. ಈ ಹಿನ್ನೆಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದು, ಆಕ್ರೋಶಿತರನ್ನು ಚದುರಿಸಿದ್ದಾರೆ.
ಹಿಂಸಾಚಾರದ ಹಿನ್ನೆಲೆ ಕ್ಷೇತ್ರಕ್ಕೆ ತೆರಳುವಂತಹ ಮಾರ್ಗ ಮಧ್ಯೆ 4 ಸ್ಥಳಗಳಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಅಯ್ಯಪ್ಪ ಸನ್ನಿಧಾನ, ಪಟ್ಟಣತಿಟ್ಟಿ, ನೀಲಕ್ಕಲ್ ಹಾಗೂ ಪಂಪದಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಜಿಲ್ಲಾಧಿಕಾರಿ ನೂರ್ ಆದೇಶ ಹೊರಡಿಸಿದ್ದಾರೆ.