ಗದಗ, ಅ 18(SM): ಬಳ್ಳಾರಿ ಕ್ಷೇತ್ರದಿಂದ ಆಯ್ಕೆಯಾಗಿ ಲೋಕಸಭೆಗೆ ಎಂಟ್ರಿ ಪಡೆದಿರುವ ಶ್ರೀರಾಮುಲು ಸಂಸತ್ ನಲ್ಲಿ ಒಮ್ಮೆಯೂ ಕ್ಷೇತ್ರ ಹಾಗೂ ರಾಜ್ಯದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಶ್ರೀರಾಮುಲು ಬಳಗ ಆಪರೇಷನ್ ಕಮಲ ಮಾಡಿದ ಕಾರಣ ಇಡೀ ಜಿಲ್ಲೆ ತಟಸ್ಥಗೊಂಡಿತ್ತು. ಇದೀಗ ಉಪ ಚುನಾವಣೆ ನಡೆಯುತ್ತಿದೆ. ಬಳ್ಳಾರಿ ಕ್ಷೇತ್ರದ ಧ್ವನಿಯಾಗಿ ಮಾತನಾಡುವ ಶಕ್ತಿಯನ್ನು ವಿ.ಎಸ್. ಉಗ್ರಪ್ಪ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಸಲಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.
ಇನ್ನು ಚುನಾವಣೆಯ ಬಳಿಕ ನನ್ನನ್ನು ಶ್ರೀರಾಮುಲು ಜೈಲಿಗೆ ಕಳುಹಿಸುತ್ತೇನೆ ಎನ್ನುತ್ತಿದ್ದಾರೆ. ನನ್ನನ್ನು ಜೈಲಿಗೆ ಕಳುಹಿಸಲು ಅವರು ಷಡ್ಯಂತ್ರ ರೂಪಿಸುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಆ ಹಿನ್ನೆಲೆಯಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ನನ್ನನ್ನು ಜೈಲಿಗೆ ಕಳುಹಿಸಲು ಶ್ರೀರಾಮುಲು ಏನು ನ್ಯಾಯಾಧೀಶರೇ ಎಂದು ಸಚಿವ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.