ಮಂಗಳೂರು, ಅ 18(SM): ದ.ಕ. ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದ ಕಸಾಯಿಖಾನೆಗೆ ಅನುದಾನ ಬಿಡುಗಡೆ ಬಹುತೇಕ ಖಚಿತವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕುದ್ರೋಳಿಯ ಕಸಾಯಿಖಾನೆಗೆ 15 ಕೋಟಿ ರೂಪಾಯಿ ಬಿಡುಗಡೆಗೊಳ್ಳಲಿದೆ.
ಮಂಗಳೂರು ಸ್ಮಾರ್ಟ್ ಸಿಟಿ ಬೋರ್ಡ್ ಸಭೆಯು ಅಕ್ಟೋಬರ್ 17ರಂದು ಬೆಂಗಳೂರಿನಲ್ಲಿ ನಡೆದಿದ್ದು, ಈ ಸಂದರ್ಭ ಕಸಾಯಿಖಾನೆಗೆ 15 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವ ನಿರ್ಣಯ ಅಂಗೀಕಾರಗೊಂಡಿದೆ. ನಿರ್ದೇಶಕರಾಗಿ ಹಾಜರಿದ್ದವರ ಪೈಕಿ ಪ್ರೇಮಾನಂದ ಶೆಟ್ಟಿ ಮಾತ್ರ ದೃಢಿಕರಣಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.
ಮಂಗಳೂರು ಮಹಾನಗರ ಪಾಲಿಕೆಯ ಪ್ರಸ್ತಾವನೆ ಇಲ್ಲದೆ ಸ್ಮಾರ್ಟ್ ಸಿಟಿ ಬೋರ್ಡ್ ನಲ್ಲಿ ಪ್ರಸ್ತಾವಣೆ ಕೈಗೊಂಡಿರುವುದು ಸರಿಯಲ್ಲ. ಇದು ಕಾನೂನು ಬಾಹಿರವಾಗಿದೆ. 15 ಕೋ. ರೂ. ವೆಚ್ಚದಲ್ಲಿ ಕಸಾಯಿಖಾನೆ ನಿರ್ಮಿಸುವುದಕ್ಕೆ ಕರಾವಳಿಯ ಜನತೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಿರ್ಣಯವನ್ನು ದೃಢಿಕರಿಸಬಾರದು ಎಂದು ಪ್ರೇಮಾನಂದ ಶೆಟ್ಟಿ ಆಗ್ರಹಿಸಿದ್ದಾರೆ.
ಆದರೆ ಸಭೆಯಲ್ಲಿ ಹಾಜರಿದ್ದ ಕಾಂಗ್ರೆಸ್ ಸದಸ್ಯರು ನಿರ್ಣಯದ ಪರವಾಗಿದ್ದ ಕಾರಣ ಪ್ರೇಮಾನಂದ ಶೆಟ್ಟಿ ಸಲ್ಲಿಸಿದ ಆಕ್ಷೇಪಣೆ ದಾಖಲಿಸಿ, ನಿರ್ಣಯ ದೃಢಿಕರಿಸಲಾಯಿತು.