ಬಂಟ್ವಾಳ,ಅ09: ಕಡೇಶ್ವಾಲ್ಯ ಗ್ರಾಮದಲ್ಲಿ ಭೂ ಅತಿಕ್ರಮಣವಾಗಿದ್ದು, ಅದನ್ನು ತೆರವುಗೊಳಿಸಿಲ್ಲ ಹಾಗೂ ಭೂವಂಚಿತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಸಿ ಅರ್ಜಿದಾರರು ಸೋಮವಾರ ಬಂಟ್ವಾಳ ತಹಶೀಲ್ದಾರ್ ಕಚೇರಿ ಬಳಿ ಉಪವಾಸ ಸತ್ಯಾಗ್ರಹ ನಡೆಸಿದರು. ಉಪವಾಸ ನಿಲ್ಲಿಸಲು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಪುರಂದರ ಹೆಗ್ಡೆ ವಿನಂತಿಸಿದರೂ ಸ್ಪಷ್ಟ ಭರವಸೆ ದೊರಕುವವರೆಗೆ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಮುಖಂಡರು, ಅಹೋರಾತ್ರಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದರು.
ಕಡೇಶ್ವಾಲ್ಯ ಗ್ರಾಮದ ಜಾಗವೊಂದರಲ್ಲಿ ಅಕ್ರಮ ಡೇರೆ ನಿರ್ಮಾಣ ಮಾಡಿ ಅತಿಕ್ರಮಣ ನಡೆಸಿದ್ದು, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ, ಸಹಯಕ ಆಯುಕ್ತರು ಮತ್ತು ತಹಶೀಲ್ದಾರ್ ಅವರಿಗೆ ತೆರವುಗೊಳಿಸುವಂತೆ ದೂರು ನೀಡಲಾಗಿತ್ತು ಎಂದು ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ತಿಳಿಸಿದರು.
ಅತಿಕ್ರಮಣದ ವಿರುದ್ಧ ಹಾಗೂ ಈಗಾಗಲೇ ನಕ್ಷೆ ತಯಾರಾಗಿರುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ, ಈ ವಿಷಯದಲ್ಲಿ ರಾಜಕೀಯ ತಾರತಮ್ಯ ನಡೆಸುವುದು ಸರಿಯಲ್ಲ ಎಂದು ಹೇಳಿದರು.
ಈ ಸಂದರ್ಭ ಮುಖಂಡರಾದ ಗೋಪಾಲ ನೇರಳಕಟ್ಟೆ, ರಾಜು ಹೊಸಮಠ, ಅಣ್ಣಿ ಏಳ್ತಿಮಾರ್, ಚಂದ್ರಶೇಖರ ಯು, ಮೋಹನದಾಸ ವಿಟ್ಲ, ಸೋಮಪ್ಪ ಪುಣಚ ಮೊದಲಾದವರು ಉಪಸ್ಥಿತರಿದ್ದರು. ಸ್ಥಳದಲ್ಲಿ ಬಂಟ್ವಾಳ ಠಾಣಾ ಎಸ್ಸೈ ರಕ್ಷಿತ್ ಗೌಡ ನೇತೃತ್ವದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಿದ್ದರು.