ಮಡಿಕೇರಿ, ಅ18(SS): ರಾಜ್ಯದ ಕೆಲವು ಬಿಜೆಪಿ ಮುಖಂಡರು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ಸಾಲ ಮನ್ನಾ ಆಗದಂತೆ ತಡೆಯೊಡ್ಡಿ ಪಿತೂರಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮಡಿಕೇರಿಯಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತರೊಂದಿಗೆ ಸಂವಾದ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲ ಮನ್ನಾಕ್ಕೆ ರಾಜ್ಯದ ಬಿಜೆಪಿ ನಾಯಕರೇ ಅಡ್ಡಿ ಪಡಿಸುತ್ತಿದ್ದಾರೆ. ಸಾಲ ಮನ್ನಾವಾದರೆ ರಾಜ್ಯ ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ, ಮುಖ್ಯಮಂತ್ರಿ ಜನರೊಂದಿಗೆ ಆತ್ಮೀಯತೆ ಬೆಳೆಸಿಕೊಳ್ಳುತ್ತಾರೆ ಎನ್ನುವ ಆತಂಕದಿಂದ ತಡೆಯೊಡ್ಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲ ಮನ್ನಾ ಘೋಷಣೆ ಮಾಡಿದ್ದೇನೆ. ನ.1 ರಿಂದ ಇದು ಜಾರಿಗೆ ಬರಬೇಕಿದೆ. ಆದರೆ, ಎಷ್ಟು ಸಾಲ ಇದೆ ಎಂಬ ಮಾಹಿತಿ ನೀಡಿ ಎಂದು ಬ್ಯಾಂಕ್ಗಳನ್ನು ಕೋರಿ ಎರಡು ತಿಂಗಳಾದರೂ ಅವುಗಳಿಂದ ಉತ್ತರ ಬಂದಿಲ್ಲ. ನನ್ನ ವೇಗಕ್ಕೆ ಅವು ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದಾರೆ.
ಈ ವೇಳೆ ಟಿಪ್ಪು ಜಯಂತಿ ಕುರಿತು ಮಾತನಾಡಿದ ಅವರು, ಟಿಪ್ಪು ಜಯಂತಿ ವಿಚಾರದಲ್ಲಿ ಸರಕಾರ ಇಲ್ಲಿ ತನಕ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅದರ ಬಗ್ಗೆ ಚಿಂತನೆ ಕೂಡ ಮಾಡಲಿಲ್ಲ. ನಮಗೆ ಮಾಡಲು ಸಾಕಷ್ಟು ಕೆಲಸವಿದೆ ಎಂದು ಹೇಳಿದ್ದಾರೆ.
ಭಾಗಮಂಡಲಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಇಲ್ಲಿಗೆ ಈ ಹಿಂದೆ ಬಂದ ನಂತರ ನಾನು ಮುಖ್ಯಮಂತ್ರಿಯಾಗಿದ್ದೇನೆ. ದೇವರೇ ಈ ಹುದ್ದೆ ಕೊಟ್ಟಿದ್ದಾನೆ. ಎಷ್ಟು ದಿನ ಅನ್ನುವುದನ್ನು ಕೂಡ ನಿರ್ಧಾರ ಮಾಡಿದ್ದಾನೆ. ನನಗರ ಯಾವುದೇ ಆತಂಕ ಇಲ್ಲ. ನಾನು ಎಷ್ಟು ಗಟ್ಟಿಯಾಗಿದ್ದೇನೆ ಎನ್ನುವ ಪರೀಕ್ಷೆ ಮಾಡಿಬಿಡೋಣ. ಬಿ.ಎಸ್.ಯಡಿಯೂರಪ್ಪ ಅವರು ನೀಡುತ್ತಿರುವ ಡೆಡ್ಲೈನ್ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ತಿಳಿಸಿದರು.