ಸುಪ್ರೀತಾ ಸಾಲ್ಯಾನ್
ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್ಬಾಗ್ ಸಂಘಟನೆ. ಈ ಹೆಸರನ್ನು ಕರಾವಳಿಯಲ್ಲಿ ಕೇಳದೇ ಇರುವವರು ತೀರಾ ವಿರಳ. ಹುಲಿ ಕುಣಿತ ಮತ್ತು ಸಮಾಜಮುಖಿ ಕೆಲಸಗಳ ಮೂಲಕ ಇಡೀ ಕರಾವಳಿಯಲ್ಲಿಯೇ ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್ಬಾಗ್ ಸಂಘಟನೆ ಸಂಚಲನ ಮೂಡಿಸಿದೆ. ತಾಸೆಯ ಪೆಟ್ಟು, ಅಬ್ಬರದ ಹೆಜ್ಜೆಗಾರಿಕೆ, ಗತ್ತಿನ ಕುಣಿತದೊಂದಿಗೆ ಹೆಸರುವಾಸಿಯಾಗಿರುವ ಮಂಗಳೂರಿನ ಹೆಮ್ಮೆಯ ಫ್ರೆಂಡ್ಸ್ ಬಲ್ಲಾಳ್ ಭಾಗ್ ಬಿರುವೆರ್ ಕುಡ್ಲ ಸಂಘಟನೆಯ ರೂವಾರಿ ಉದಯ್ ಪೂಜಾರಿ ಬಲ್ಲಾಳ್ಬಾಗ್. ಹೌದು ಸಮಾಜಮುಖಿ ಕೆಲಸಗಳ ಮೂಲಕ ಜನಮಾನಸದಲ್ಲಿ ಚಿರಪರಿಚಿತವಾಗಿರುವ ಹೆಸರು ಉದಯ ಪೂಜಾರಿ ಬಲ್ಲಾಳ್ಬಾಗ್. ಇವರು 4 ವರ್ಷಗಳ ಹಿಂದೆ 'ಬಿರುವೆರ್ ಕುಡ್ಲ' ಸಂಘಟಣೆಯ 'ಉದಯ'ಕ್ಕೆ ಕಾರಣವಾದವರು.
ಬಾಲ್ಯದಲ್ಲಿಯೇ ಉದಯ್ ಪೂಜಾರಿ ಅವರಿಗೆ ಸಂಘಟನೆಯಲ್ಲಿ ಅತೀವ ಆಸಕ್ತಿ ಇತ್ತು. ಎಳೆಯ ವಯಸ್ಸಿನಲ್ಲಿಯೇ ಸಂಘಟನೆಯತ್ತ ಆಕರ್ಷಿತರಾಗಿದ್ದ ಇವರಿಗೆ ಕರಾವಳಿಯಲ್ಲಿ ಬಲಿಷ್ಟ ಸಂಘಟನೆಯೊಂದನ್ನು ಕಟ್ಟುವ ಬಯಕೆಯಿತ್ತು. ಆ ಕನಸಿನ ಫಲವೇ ಬಿರುವೆರ್ ಕುಡ್ಲ - ಫ್ರೆಂಡ್ಸ್ ಬಲ್ಲಾಳ್ಬಾಗ್ ಸಂಘಟನೆ. ದೈವೀ ಶಕ್ತಿಯಿರುವ ಹುಲಿವೇಷಕ್ಕೆ ಕರಾವಳಿಯಲ್ಲಿ ಐವತ್ತಕ್ಕೂ ಅಧಿಕ ವರುಷಗಳ ಇತಿಹಾಸವಿದೆ. ಅದರಲ್ಲೂ ಬಿರುವೆರ್ ಕುಡ್ಲ - ಫ್ರೆಂಡ್ಸ್ ಬಲ್ಲಾಳ್ಬಾಗ್ ಸಂಘಟನೆಯ ಹುಲಿಗಳ ವೇಷ ಅತ್ಯಂತ ವಿಭಿನ್ನವಾಗಿರುವಂತಹದ್ದು ಮತ್ತು ಆಕರ್ಷಣೀಯವಾದದ್ದು. ಹುಲಿ ಕುಣಿತ ಮತ್ತು ಸಮಾಜಮುಖಿ ಕೆಲಸಗಳ ಮೂಲಕ ಜನರ ಮನಗೆದ್ದಿರುವ ಕರಾವಳಿಯ ಹೆಮ್ಮೆಯ ಸಂಘಟನೆ ಇದು.
ಉದಯಪೂಜಾರಿ ಬಲ್ಲಾಳ್ಬಾಗ್ ಅವರ ಕನಸಿನ ಕೂಸು ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್ಬಾಗ್ ಸಂಘಟನೆಯು ಕಳೆದ ನಾಲ್ಕು ವರುಷಗಳಿಂದ ದೀನ ದಲಿತರ, ಅಶಕ್ತರ ಆಶಾಕಿರಣವಾಗಿ ಕರಾವಳಿಯಲ್ಲಿ ಮೂಡಿ ಬರುತ್ತಿದೆ. ಕೆಲವೇ ಕೆಲವು ಸದಸ್ಯರಿಂದ ಅಂಬೆಗಾಲಿಡುತ್ತಾ ಹುಟ್ಟಿದ ಬಿರುವೆರ್ ಕುಡ್ಲ - ಫ್ರೆಂಡ್ಸ್ ಬಲ್ಲಾಳ್ಬಾಗ್ ಸಂಘಟನೆ ಕೇವಲ ಸಂಘಟನೆಯಾಗಿರದೇ ಮಾನವೀಯತೆಯ ನೆಲೆಯಲ್ಲಿ ಹೆಜ್ಜೆ ಹಾಕುತ್ತಿದೆ.
ಕರಾವಳಿಯ ಜನಪ್ರಿಯ ಸಂಘಟನೆಯಾಗಿರುವ ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್ಬಾಗ್ ಕೇವಲ ಮಂಗಳೂರು ದಸರಾ ಸಮಯದಲ್ಲಿ ಮಾತ್ರ ಹೆಸರುವಾಸಿಯಲ್ಲ... ಹುಲಿವೇಷದ ಹೊರತಾಗಿಯೂ ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್ಬಾಗ್ ಸಂಘಟನೆ ಜಾತ್ಯಾತೀತ ನೆಲೆಯಲ್ಲಿ ಸಮಾಜದ ಬಡ ಜನರಿಗೆ ನೆರವಿನ ಹಸ್ತ ಚಾಚುತ್ತಿದೆ. 2017ರ ಮಂಗಳೂರು ದಸರಾದಲ್ಲಿ ಹುಲಿ ಕುಣಿತ ಪ್ರದರ್ಶಿಸಿದ ಬಿರುವೆರ್ ಕುಡ್ಲ ಸಂಘಟನೆ, ಮಾನವೀಯತೆಯ ಕಾರ್ಯ ಮಾಡಿ ಜನ ಮೆಚ್ಚುಗೆ ಪಡೆದುಕೊಂಡಿದೆ. ಕೇವಲ ಒಂದೂವರೆ ಗಂಟೆಯಲ್ಲಿ ಹುಲಿ ಕುಣಿತದಿಂದ ಒಟ್ಟಾದ ಮೂರುವರೆ ಲಕ್ಷ ರೂಪಾಯಿಗಳನ್ನು 3 ಬಡ ಕುಟುಂಬಗಳಿಗೆ ಕೊಟ್ಟು ಇತರ ಸಂಘಟನೆಗಳಿಗೆ ಮಾದರಿಯಾಗಿ ಬೆಳೆದು ನಿಂತಿದೆ.
ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ತತ್ವದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್ಬಾಗ್ ಸಂಘಟನೆ ಜನರ ಕಷ್ಟಗಳಿಗೆ ಸ್ಪಂದಿಸುವ ಧ್ಯೇಯವನ್ನು ಇಟ್ಟುಕೊಂಡಿದೆ. ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ತತ್ವವನ್ನು ಜಗತ್ತಿಗೆ ಸಾರಿದ ಮಹಾನ್ ಪುರುಷ ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಸತ್ಯ ಧರ್ಮ ನ್ಯಾಯ ನೀತಿಗಳನ್ನು ಎತ್ತಿ ಹಿಡದ ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯರನ್ನು ಸ್ಫೂರ್ತಿಯನ್ನಾಗಿಟ್ಟುಕೊಂಡು ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್ಬಾಗ್ ಸಂಘಟನೆ ಸಾಧನೆಯ ಹಾದಿಯಲ್ಲಿ ಮುಂದುವರಿಯುತ್ತಿದೆ.
ಕರಾವಳಿಯಲ್ಲಿ ಕಲೆಗೆ ಜಾತಿ – ಮತ - ಭೇದ ಇಲ್ಲ ಎಂಬುವುದನ್ನು ತೋರಿಸಿಕೊಟ್ಟದ್ದು ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್ಬಾಗ್ ಸಂಘಟನೆ. ಈ ಸಂಘಟನೆಯು ಕೇವಲ ಒಂದು ಜಾತಿಗೆ ಸೀಮಿತವಾಗದೆ ಎಲ್ಲ ಜಾತಿಯವರನ್ನು ಒಟ್ಟುಗೂಡಿಸಿಕೊಂಡು ಜನ ಮನ್ನಣೆ ಪಡೆದುಕೊಂಡಿದೆ. ಎಲ್ಲಾ ಧರ್ಮ- ಜಾತಿ ಸಮುದಾಯದ ಯುವಕರ ಬೆಂಬಲ ಈ ಸಂಘಟನೆಗಿದೆ.