ಕರಂಗಲ್ಪಾಡಿ, ಅ19(SS): ಮನೆ ಅದೆಷ್ಟು ಅಂದವಾಗಿದ್ದರೂ, ಮುಂಭಾಗದಲ್ಲಿ ಪುಟ್ಟದೊಂದು ಉದ್ಯಾನವನವಿಲ್ಲದಿದ್ದರೆ ಮನೆಗೆ ಶೋಭೆ ಇರುವುದಿಲ್ಲ. ಆದರೆ ನಗರ ಪ್ರದೇಶದಲ್ಲಿ ಅಡಿ ಜಾಗಕ್ಕೂ ಪ್ಲಾಟಿನಂ ಬೆಲೆ. ಜೊತೆಗೆ ಆಧುನಿಕ ಭರಾಟೆಯ ದಿನಗಳಲ್ಲಿ ಕಾಂಕ್ರೀಟ್ ಕಟ್ಟಡಗಳ ನಡುವೆ ಜಾಗದ ಕೊರತೆ ಕೂಡಾ ಸಾಮಾನ್ಯ. ಹೀಗಾಗಿ ಗಾರ್ಡನ್ಗೆ ಅಂತ ಜಾಗ ಮೀಸಲಿಡೋದು ಕಡಿಮೆ, ಕಷ್ಟದ ಮಾತು. ಆದರೆ ನಗರಪ್ರದೇಶದಲ್ಲಿಯೂ ಲಭ್ಯವಿರುವ ಕಡಿಮೆ ಜಾಗವನ್ನೇ ಬಳಸಿಕೊಂಡು ಸುಂದರ ಉದ್ಯಾನವೊಂದನ್ನು ನಿರ್ಮಿಸಬಹುದು ಎಂಬುದಾಗಿ ತೋರಿಸಿಕೊಟ್ಟಿದ್ದಾರೆ ಮಂಗಳೂರಿನ ಕರಂಗಲ್ಪಾಡಿ ನಿವಾಸಿ ಲಿಲ್ಲಿ ಪಿಂಟೋ.
ಕಳೆದ ನಾಲ್ಕೈದು ವರ್ಷಗಳಿಂದ ಗಾರ್ಡನಿಂಗ್ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಲಿಲ್ಲಿಪಿಂಟೋ ಮನೆಯ ಆವರಣದಲ್ಲೆಲ್ಲಾ ವಿವಿಧ ಬಗೆಯ ಬಣ್ಣ ಬಣ್ಣದ ಹೂವು, ಹಣ್ಣು, ತರಕಾರಿ, ವಿವಿಧ ಜಾತಿಯ ಮರ ಗಿಡಗಳನ್ನು ಬೆಳೆಸಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ. ವಿವಿಧ ಬಗೆಯ ಗುಲಾಬಿ, ದಾಸವಾಳ, ಮಲ್ಲಿಗೆ, ಝೆರ್ಬೆರಾಸ್, ಪೆಂಟಾಸ್, ಪಾರಿಜಾತ, ಗ್ರೌಂಡ್ಸ್ ಆರ್ಕಿಡ್, ಅಂತೋರಿಯಂ, ಎಡೇನಿಯಂ, ಟೇಬಲ್ ರೋಸ್, ಬೊಗೊನ್, ಲೆಂಟಾನ, ಅಲಮಾಂಡ, ರತ್ನಗಾಂದಿ, ಡೇಝೀಸ್ ಸೇರಿದಂತೆ ಇನ್ನೂ ಹಲವಾರು ಜಾತಿಯ ಹೂ ಗಿಡಗಳ ತಳಿಗಳನ್ನು ಬೆಳೆಸುತ್ತಿದ್ದಾರೆ. ಮನೆಯ ಆವರಣದಲ್ಲಿ ಮಾತ್ರವಲ್ಲದೇ ಮನೆಯ ಒಳಾಂಗಣ ಪ್ಲಾಂಟ್ಸ್ನ್ನು ಕೂಡಾ ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ವಿವಿಧ ಹುಲ್ಲು ತರಹದ ಹೂವಿನ ಗಿಡಗಳು ಕೂಡಾ ಲಿಲ್ಲಿ ಪಿಂಟೋರವರ ಮನೆಯ ಆವರಣವನ್ನು ಚೆಂದಗೊಳಿಸುತ್ತಿವೆ. ವಿವಿಧ ತಳಿಯ ಬಾಳೆಗಿಡಗಳೊಂದಿಗೆ ತೋತಾಪುರಿ, ಮಲ್ಲಿಕಾ, ಆಪೊಸ್ ಮೊದಲಾದ ಮಾವು ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಔಷಧಿ ಗುಣಗಳಿರುವ ಒಂದೆಲಗ, ಅಲೋವೆರಾ, ಮಿಂಟ್, ನಿಂಬೆ, ತುಳಸಿ, ಇನ್ಸುಲಿನ್, ಅರಸಿಣ, ಏಲಕ್ಕಿ ಇತ್ಯಾದಿ ಗಿಡಗಳು ಇಲ್ಲಿವೆ. ದಿನಬಳಕೆಗೆ ಅಗತ್ಯವಿರುವ ತರಕಾರಿ, ಹಣ್ಣು ಹಂಪಲುಗಳ ಕೃಷಿ ಕಾಯಕದಲ್ಲೂ ಕೂಡಾ ಲಿಲ್ಲಿ ಪಿಂಟೋ ತೊಡಗಿಸಿಕೊಂಡಿದ್ದಾರೆ.
ಮಂಗಳೂರಿನ ಕರಂಗಲ್ಪಾಡಿ ನಿವಾಸಿಯಾಗಿರುವ ಲಿಲ್ಲಿಪಿಂಟೋ, ಕಂಕನಾಡಿ ಫಾದರ್ ಮುಲ್ಲರ್ಸ್ ನಲ್ಲಿ ನರ್ಸಿಂಗ್ ವಿದ್ಯಾಭ್ಯಾಸ ಮುಗಿಸಿ, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಹಾಗೂ ಮಂಗಳೂರಿನ ಒಮೆಗಾ ಆಸ್ಪತ್ರೆಯಲ್ಲೂ ನರ್ಸ್ ಆಗಿ ಸೇವೆಸಲ್ಲಿಸಿದ್ದರು. 2007ರಲ್ಲಿ ನರ್ಸ್ ವೃತ್ತಿಗೆ ರಾಜೀನಾಮೆ ನೀಡಿದ ಬಳಿಕ ಗಾರ್ಡನಿಂಗ್ ಹವ್ಯಾಸದಲ್ಲಿ ನಿರತರಾದರು. ಶತಮಾನದಷ್ಟು ಹಳೆಯ ತಮ್ಮ ಹಂಚಿನ ಮನೆಯನ್ನು ಉಳಿಸುವ ಉದ್ದೇಶದಿಂದ ತಾವೀಗ ವಾಸವಿರುವ ಹಾಗೂ ಹಳೆಯ ಮನೆಯ ಸುತ್ತಲ್ಲೂ ಹೂವು, ಹಣ್ಣು, ತರಕಾರಿ ಗಿಡಗಳನ್ನು ಬೆಳೆಸಿ ಇತರರಿಗೂ ತರಬೇತಿ ನೀಡುತ್ತಿದ್ದಾರೆ.
ಬೆಂಗಳೂರಿನ ಸರಕಾರಿ ಪ್ಲೈಯಿಂಗ್ ಸ್ಕೂಲ್ ಇನ್ಸ್ಟ್ರಕ್ಟರ್ ಅಲೋಶಿಯಸ್ ಪಿಂಟೋರವರ ಪತ್ನಿಯಾಗಿರುವ ಲಿಲ್ಲಿಪಿಂಟೋರ ಪರಿಸರ ಕಾಳಜಿ ಮೆಚ್ಚುವಂತದ್ದೇ. ಪತಿ ಹಾಗೂ ಇಬ್ಬರು ಮಕ್ಕಳ ಪ್ರೋತ್ಸಾಹವನ್ನು ಸ್ಮರಿಸಿಕೊಳ್ಳುತ್ತಾರೆ ಲಿಲ್ಲಿಪಿಂಟೋ. ಗಿಡಗಳ ಮಾರಾಟದ ಬದಲಾಗಿ ಅದರಿಂದ ಬಿಡುವ ಹೂವು ಹಣ್ಣುಗಳನ್ನು ಅಕ್ಕಪಕ್ಕದವರಿಗೆ ನೀಡಿ ಸಂತಸ ಪಡುತ್ತಾರೆ ಪಿಂಟೋ ದಂಪತಿ. ಬೆಂಗಳೂರು, ಮೈಸೂರು, ಕೊಚ್ಚಿನ್ ಹೀಗೆ ದೂರದೂರಿನಿಂದ ವಿವಿಧ ಜಾತಿಯ ಹೂವು, ಹಣ್ಣು, ತರಕಾರಿ ಗಿಡಗಳನ್ನು ತಂದು ಗಾರ್ಡನಿಂಗ್ ಮಾಡುತ್ತಿದ್ದಾರೆ. ಶತಮಾನದಷ್ಟು ಹಳೆಯದಾದ ಹಂಚಿನ ಮನೆ ಸಂರಕ್ಷಣೆಗಾಗಿ ನಿರತವಾದ ಈ ಕಾಯಕ ಇಂದು ಕಾಂಕ್ರೀಟ್ ಕಟ್ಟಡಗಳ ನಡುವಣ ಕಡಿಮೆ ಜಾಗದಲ್ಲೂ ಉದ್ಯಾನ ನಿರ್ಮಿಸಬಹುದು ಅನ್ನೋದಕ್ಕೆ ಲಿಲ್ಲಿಪಿಂಟೋರವರೆ ಸಾಕ್ಷಿಯಾಗಿ ನಿಲ್ಲುತ್ತಾರೆ. ಲಿಲ್ಲಿ ಪಿಂಟೋರವರ ಪರಿಸರ ಕಾಳಜಿಗೆ ಈಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.