ಸುಪ್ರೀತಾ ಸಾಲ್ಯಾನ್
ಬರ್ಕೆ ಫ್ರೆಂಡ್ಸ್.. ಈ ಹೆಸರು ಕರಾವಳಿಯಲ್ಲಿ ಕೇಳದೆ ಇರುವವರು ತೀರಾ ವಿರಳ. ಕೆಲವೇ ಕೆಲವು ಸದಸ್ಯರಿಂದ ಆರಂಭವಾಗಿ ಅಂಬೆಗಾಲಿಡುತ್ತಾ ಬೆಳೆದು ಬಂದ ಬರ್ಕೆ ಫ್ರೆಂಡ್ಸ್ ಸಂಘಟನೆ ಹುಲಿವೇಷದ ಜೊತೆಗೆ ಬೇರೆ ಬೇರೆ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕರಾವಳಿಯ ಹೆಮ್ಮೆಯ ಸಂಘಟನೆಯಾಗಿದೆ. ಕರಾವಳಿಯಲ್ಲಿ ಅಬ್ಬರದ ಹುಲಿಕುಣಿತದೊಂದಿಗೆ ತನ್ನದೇ ಆದ ಗತ್ತನ್ನು, ಪ್ರತಿಷ್ಠೆಯನ್ನು ಪಡೆದ ಹೆಮ್ಮೆಯ ತಂಡ ಬರ್ಕೆ ಫ್ರೆಂಡ್ಸ್.
ಕರಾವಳಿಯಲ್ಲಿ ಎಷ್ಟೇ ಹುಲಿವೇಷಗಳ ತಂಡವಿದ್ದರೂ, ಹುಲಿಗಳ ವಿಚಾರವಾಗಿ ಮಾತನಾಡುವಾಗ ನಮ್ಮ ನೆನಪಿಗೆ ಥಟ್ಟನೇ ಬರುವಂತಹ ತಂಡ ಅದು ಬರ್ಕೆ ಫ್ರೆಂಡ್ಸ್. ಈ ತಂಡದ ರೂವಾರಿ ಯಜ್ಞೇಶ್ವರ್ ಕುಲಾಲ್ ಬರ್ಕೆ. ಹಲವಾರು ವರುಷಗಳ ಹಿಂದೆ ಮಂಗಳೂರನ್ನು ಬೆಚ್ಚಿ ಬೀಳಿಸಿದ ಇವರು ಇದೀಗ ನೊಂದವರ, ಬಡವರ ಕಣ್ಣೀರೊರೆಸುವ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ.
ಯಜ್ಞೇಶ್ ಕುಲಾಲ್ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ಈ ತಂಡಕ್ಕೆ ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನದ ನವರಾತ್ರಿ ಆಚರಣೆ ವೇಳೆ ಮೂರನೇ ಮರ್ಯಾದೆ ಸಿಗುತ್ತಿರುವುದು ಗಮನಾರ್ಹ. 25 ವರ್ಷದ ಹಿಂದೆ ಸುಮಾರು 41 ಹುಲಿವೇಷದಿಂದ ಆರಂಭಗೊಂಡ ಈ ತಂಡದಲ್ಲಿ ಇದೀಗ 101 ಹುಲಿವೇಷಧಾರಿಗಳಿದ್ದಾರೆ. ಇನ್ನುಳಿದಂತೆ 150ಕ್ಕೂ ಅಧಿಕ ಕಲಾವಿದರು ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದೀಗ ಬರ್ಕೆ ಫ್ರೆಂಡ್ಸ್ ತಂಡಕ್ಕೆ 26ರ ಸಂಭ್ರಮ.
ಕಡಲತಡಿ ಮಂಗಳೂರಿನಲ್ಲಿರುವ ಅನೇಕ ಹುಲಿವೇಷ ತಂಡಗಳ ಪೈಕಿ ತನ್ನದೇ ಆದ ಶಿಸ್ತಿನ ಕುಣಿತ, ವಿಭಿನ್ನ ವೇಷಭೂಷಣಗಳ ಮೂಲಕ ದೇಶದಾದ್ಯಂತ ಹೆಸರು ಮಾಡಿರುವ ಹೆಮ್ಮೆಯ ತಂಡ ಬರ್ಕೆ ಫ್ರೆಂಡ್ಸ್. ಮಾತ್ರವಲ್ಲ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ವತಿಯಿಂದ ನಡೆಯುವ ಮಂಗಳೂರು ದಸರಾದಲ್ಲಿ ಬರ್ಕೆ ಫ್ರೆಂಡ್ಸ್ ತಂಡಕ್ಕಿದೆ ರಾಜ ಮರ್ಯಾದೆ.
ಮಂಗಳೂರು ದಸರಾದಲ್ಲಿ ತನ್ನದೇ ಆದ ವಿಶಿಷ್ಟ ಹಾವಭಾವ, ವೇಷಭೂಷಣ, ಅಬ್ಬರದ ತಾಸೆಯ ಸದ್ದು, ಆರ್ಭಟದ ಹೆಜ್ಜೆಗಾರಿಕೆ, ಗತ್ತು ಗೈರತ್ತಿನ ನಲಿಕೆಯಿಂದ ಪ್ರತಿಷ್ಠೆ ಪಡೆದು, ಸಾಕಷ್ಟು ಹೆಸರು ಮಾಡಿರುವ ಹುಲಿವೇಷದ ತಂಡಗಳಲ್ಲಿ ಮಂಗಳೂರಿನ ಬರ್ಕೆ ಫ್ರೆಂಡ್ಸ್ ತಂಡವೂ ಒಂದು.
ಕರಾವಳಿಯ ಜನಪ್ರಿಯ ಸಂಘಟನೆಯಾಗಿರುವ ಬರ್ಕೆ ಫ್ರೆಂಡ್ಸ್ ಸಂಘಟನೆ ಕೇವಲ ಮಂಗಳೂರು ದಸರಾ ಸಮಯದಲ್ಲಿ ಮಾತ್ರ ಹೆಸರುವಾಸಿಯಲ್ಲ... ಹುಲಿವೇಷದ ಹೊರತಾಗಿಯೂ ಬರ್ಕೆ ಫ್ರೆಂಡ್ಸ್ ಸಂಘಟನೆ ಜಾತ್ಯಾತೀತ ನೆಲೆಯಲ್ಲಿ ಸಮಾಜದ ಬಡ ಜನರಿಗೆ ನೆರವಿನ ಹಸ್ತ ಚಾಚುತ್ತಿದೆ. ಇದು ಕೇವಲ ಸಂಘಟನೆಯಾಗಿರದೇ ಮಾನವೀಯತೆಯ ನೆಲೆಯಲ್ಲಿಯೂ ಕರಾವಳಿಯಲ್ಲಿ ಹೆಜ್ಜೆ ಹಾಕುತ್ತಿದೆ.