ಕುಂದಾಪುರ, ಅ 18(SM): ಅಕ್ಟೋಬರ್ ೧೬ರಿಂದ ಕರಾವಳಿ ನಿಯಂತ್ರಿತ ವಲಯವನ್ನು ಹೊರತುಪಡಿಸಿ ಮರಳುಗಾರಿಕೆಗೆ ಅನುಮತಿ ನೀಡುವುದಾಗಿ ಭರವಸೆ ನೀಡಿದ್ದ ಜಿಲ್ಲಾಡಳಿತ ಮರಳುಗಾರಿಕೆಗೆ ಅನುಮತಿ ನೀಡಿಲ್ಲ ಎಂದು ಆರೋಪಿಸಿ ಕುಂದಾಪುರ ಟಿಪ್ಪರ್ ಮಾಲಕರ ಸಂಘದ ವತಿಯಿಂದ ಹೆಮ್ಮಾಡಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಗೊಂಡಿದೆ.
ಟಿಪ್ಪರ್ ವಾಹನಗಳ ಮಾಲಕರು ಟಿಪ್ಪರ್ ಗಳನ್ನು ನಿಲ್ಲಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಗೊಂಡಿದೆ. ಕುಂದಾಪುರದ ಹೆಮ್ಮಾಡಿಯ ರಾಷ್ಟೀಯ ಹೆದ್ದಾರಿ ಬಳಿ ಟಿಪ್ಪರ್ ಗಳನ್ನು ನಿಲ್ಲಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಗುರುವಾರರಂದು ಚಾಲನೆ ನೀಡಲಾಗಿದೆ.
ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಕುಂದಾಪುರ ಟಿಪ್ಪರ್ ಮಾಲಕರ ಸಂಘದ ಅಧ್ಯಕ್ಷ ಗುಣಕಾರ್ ಶೆಟ್ಟಿ, ಜಿಲ್ಲೆಯಲ್ಲಿ ಮರಳುಗಾರಿಕೆ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಮಗ್ರ ಮರಳು ನೀತಿ ಜಾರಿಗೆ ಬರಬೇಕು. ಹಾಗೂ ಜಿಲ್ಲೆಯ ಎಲ್ಲಾ ಕಡೆಯಲ್ಲೂ ಮರಳುಗಾರಿಕೆ ತಕ್ಷಣ ಪ್ರಾರಂಭಿಸಬೇಕು ಎಂಬುದಾಗಿ ಆಗ್ರಹಿಸಿದರು.
ಇನ್ನು ಕಳೆದ ಎರಡು ವರ್ಷಗಳಿಂದ ಉಡುಪಿಯಲ್ಲಿ ಮರಳುಗಾರಿಕೆ ನಿಷೇಧಿಸಿರುವುದರಿಂದ ಮರಳು ಲಭ್ಯವಾಗುತ್ತಿಲ್ಲ. ಇದರಿಂದಾಗಿ ಹಲವಾರು ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಹತ್ತು ಹಲವು ನಿರ್ಮಾಣ ಕಾಮಾಗಾರಿಗಳು ಕೂಡ ಸ್ಥಗಿತಗೊಂಡಿದೆ. ಈ ಹಿನ್ನೆಲೆ ಮರಳುಗಾರಿಕೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಧರಣಿ ಆರಂಭಿಸಲಾಗಿದೆ.