ಬೈಂದೂರು, ಅ19(SS): ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರಕಾರದ ಒಡೆದು ಆಳುವ ನೀತಿಯಿಂದಲೇ ಕಾಂಗ್ರೆಸ್ಗೆ ರಾಜ್ಯದಲ್ಲಿ ಸೋಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗ ಲೋಕಸಭೆ ಉಪ ಚುನಾವಣೆ ಹಿನ್ನೆಲೆ ಕಣದಲ್ಲಿರುವ ಅಭ್ಯರ್ಥಿ ರಾಘವೇಂದ್ರ ಪರ ಬೈಂದೂರಿನಲ್ಲಿ ಪ್ರಚಾರ ಕಾರ್ಯ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯುತರನ್ನು ವೀರಶೈವರನ್ನು ಬೇರ್ಪಡಿಸಿರುವುದು ಕಾಂಗ್ರೆಸ್ಗೆ ಹಿನ್ನಡೆಯನ್ನುಂಟು ಮಾಡಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಕಾಂಗ್ರೆಸನ್ನು ಕಿತ್ತೆಸೆದು ಕಸದ ಬುಟ್ಟಿಗೆ ಹಾಕಲಿದ್ದಾರೆ ಎಂದು ಗುಡುಗಿದರು.
ಸರಕಾರ ಇತ್ತೀಚೆಗೆ ಮೈಸೂರಿನಲ್ಲಿ ಆಯೋಜನೆ ಮಾಡಿರುವ ಟೂರಿಸಂ ಫೆಸ್ಟ್ ನಲ್ಲಿ ಹುಡುಗಿಯರ ಮೇಲೆ ದೌರ್ಜನ್ಯ ಎಸಗಲಾಗಿದ್ದು, ರಾಜ್ಯ ಸರಕಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವ ಸಂದರ್ಭ ಸರಕಾರ ಇದೆಯೋ ಸತ್ತಿದೆಯೋ ಎಂಬ ಪ್ರಶ್ನೆ ಕಾಡುತ್ತದೆ ಎಂದು ಖಾರವಾಗಿ ನುಡಿದಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರಕಾರ ಟಿಪ್ಪು ಜಯಂತಿಯನ್ನು ಆಚರಣೆಗೆ ತಂದಿದೆ. ಆ ಮೂಲಕ ರಾಜ್ಯದಲ್ಲಿ ಘರ್ಷಣೆಗೆ ಕಾರಣಾವಾಗಿದೆ. ಆದರೆ, ಸಿದ್ದರಾಮಯ್ಯ ಮಾಡಿರುವ ತಪ್ಪನ್ನು ಸಿಎಂ ಕುಮಾರಸ್ವಾಮಿ ಮಾಡಬಾರದು ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.