ಮಂಗಳೂರು, ಅ19(SS): ನವರಾತ್ರಿ ಸಂಭ್ರಮವನ್ನು 9 ದಿನಗಳ ಕಾಲ ವಿಜೃಂಬಣೆಯಿಂದ ದೇಶದ ಎಲ್ಲೆಡೆ ಆಚರಿಸಲಾಗುತ್ತದೆ. ಈ ವೇಳೆ ಎಲ್ಲಾ ದೇವಾಲಯಗಳಲ್ಲಿಯೂ 9 ದಿನಗಳ ಕಾಲ ಹಬ್ಬದ ವಾತಾವರಣವನ್ನು ಕಾಣಬಹುದು. ಒಂದೊಂದು ದಿನ ಒಂದೊಂದು ಅಲಂಕಾರದಿಂದ ಕಂಗೊಳಿಸುವ ದೇವತೆಗಳು ಶರನ್ನವರಾತ್ರಿಯ ವಿಶೇಷವಾಗಿದೆ.
ನವರಾತ್ರಿ ಸಂಭ್ರಮ ದೇಶದೆಲ್ಲೆಡೆ ರಂಗೇರಿರುತ್ತಿದ್ದರೆ, ಇತ್ತ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ವಿನೂತನ ರೀತಿಯಲ್ಲಿ ನವರಾತ್ರಿ ಹಬ್ಬವನ್ನು ಆಚರಿಸಲಾಗಿದೆ. ಮಹಾನವಮಿ ಹಿನ್ನಲೆಯಲ್ಲಿ ಭಾರತೀಯ ವಿಮಾನ ಯಾನ ಪ್ರಾಧಿಕಾರ ಮತ್ತು ಮಂಗಳೂರು ವಿಮಾನ ನಿಲ್ದಾಣ ವತಿಯಿಂದ ತುಳುನಾಡ ಸಂಪ್ರದಾಯದಂತೆ ದಸರಾ ಆಚರಣೆ ನಡೆದಿದೆ.
ಮಂಗಳೂರು ವಿಮಾನ ನಿಲ್ದಾಣವನ್ನು ಬಣ್ಣದ ಬೆಳಕಿಂದ ಅಲಂಕಾರಗೊಳಿಸಲಾಗಿದೆ. ಮಾತ್ರವಲ್ಲ ಹುಲಿ ವೇಷ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ನಿಲ್ದಾಣಕ್ಕೆ ಆಗಮಿಸುವ ಪ್ರವಾಸಿಗರಿಗೆ ತುಳುನಾಡ ಸಂಸ್ಕೃತಿ ಪರಿಚಯಿಸುವ ಕೆಲಸ ಕೂಡ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಈ ವೇಳೆ ಕಾಲೇಜು ವಿದ್ಯಾರ್ಥಿಗಳು ಯಕ್ಷಗಾನ, ಸಾಂಪ್ರದಾಯಿಕ ನ್ರತ್ಯ, ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕಿ ವಿಮಾನ ನಿಲ್ದಾಣದಲ್ಲಿ ಹಬ್ಬದ ವಾತಾವರಣ ನಿರ್ಮಿಸಿದ್ದಾರೆ.