ತಿರುವನಂತಪುರಂ, ಅ19(SS): ಸುಪ್ರೀಂ ಕೋರ್ಟ್ ಆದೇಶ ಮತ್ತು ಕೇರಳ ಪೊಲೀಸರ ಭಾರಿ ಭದ್ರತೆಯ ನಡುವೆಯೂ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶ ಅಸಾಧ್ಯವಾಗಿದ್ದು, ಶಬರಿಮಲೆಯಿಂದ ಮಹಿಳಾ ಪತ್ರಕರ್ತೆಯರು ವಾಪಸ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಸಾವಿರಾರು ವರುಷಗಳ ಪುರಾತನ ಧಾರ್ಮಿಕ ಕ್ಷೇತ್ರ ಶಬರಿಮಲೆ ದೇಗುಲ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಇಬ್ಬರು ಮಹಿಳಾ ಪತ್ರಕರ್ತೆಯರು ಇಂದು ದೇಗುಲ ಪ್ರವೇಶಕ್ಕೆ ಯತ್ನಿಸಿದ್ದರು. ಆಂಧ್ರ ಪ್ರದೇಶ ಮೂಲದ ಪತ್ರಕರ್ತೆ ಕವಿತಾ ಜಕ್ಕಲ್ ಮತ್ತು ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾ ಶಬರಿಮಲೆಯತ್ತ ಪ್ರಯಾಣ ಆರಂಭಿಸಿದ್ದರು. 200 ಪೊಲೀಸರ ನೆರವಿನೊಂದಿಗೆ ಮಹಿಳೆಯರು ಅಯ್ಯಪ್ಪ ದೇಗುಲದತ್ತ ಹೆಜ್ಜೆ ಹಾಕಿದ್ದರು. ಪೊಲೀಸರಂತೆ ಹೆಲ್ಮೆಟ್ ಹಾಗೂ ಸಮವಸ್ತ್ರ ಧರಿಸಿ ಭಾರೀ ಭದ್ರತೆಯ ಮೂಲಕ ದೇವಾಲಯದತ್ತ ತೆರಳಿದ್ದರು. ಆದರೆ ಅಯ್ಯಪ್ಪ ಸ್ವಾಮಿ ಭಕ್ತರ ತೀವ್ರ ಪ್ರತಿಭಟನೆಗೆ ಅವರು ಮಣಿದಿದ್ದು, ಶಬರಿಮಲೆಯಿಂದ ವಾಪಸ್ ತೆರಳಲು ನಿರ್ಧರಿಸಿದ್ದಾರೆ.
ಮಹಿಳೆಯರು ಪಂಪಾ ದಾಟುತ್ತಿದ್ದಂತೆಯೇ ಪ್ರತಿಭಟನೆ ತೀವ್ರಗೊಂಡಿದ್ದು, ಸ್ವತಃ ಅಯ್ಯಪ್ಪ ಸ್ವಾಮಿ ದೇಗುಲದ ಪ್ರಧಾನ ಅರ್ಚಕರು ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಶಬರಿಲಮಯೆ ಪವಿತ್ರ 18 ಮೆಟ್ಟಿಲುಗಳ ಮೇಲೆ ಅಯ್ಯಪ್ಪ ಸ್ವಾಮಿ ಭಕ್ತರು ಕುಳಿತು ನಾವು ಸತ್ತರೂ ಸರಿಯೇ ಮೆಟ್ಟಿಲ ಮೂಲಕ ಮಹಿಳೆಯರು ತೆರಳಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಈ ಹಿನ್ನೆಲೆಯಲ್ಲಿ, ಪೊಲೀಸ್ ವರಿಷ್ಠಾಧಿಕಾರಿಗಳು ಪಥನಂತಿಟ್ಟ ಕಚೇರಿಯಲ್ಲಿ ಸಂಧಾನ ಸಭೆ ಆಯೋಜಿಸಿದರು. ಈ ವೇಳೆ ಕಚೇರಿಗೆ ಮಹಿಳಾ ಪತ್ರಕರ್ತೆಯರನ್ನೂ ಕರೆಸಿಕೊಂಡ ಅಧಿಕಾರಿಗಳು ಈ ಗಂಭೀರ ಪರಿಸ್ಥಿತಿಯಲ್ಲಿ ದೇವರ ದರ್ಶನ ಬೇಡ ಎಂದು ಪತ್ರಕರ್ತೆಯರ ಮನವೊಲಿಸಿ ಹಿಂದಕ್ಕೆ ಕಳುಹಿಸಿದ್ದಾರೆ.
ದೇವರ ದರ್ಶನಕ್ಕಾಗಿ ಕಣ್ಣೀರು ಹಾಕಿ ಗೋಗರೆದರೂ, ಅಯ್ಯಪ್ಪ ಭಕ್ತರು ಮಹಿಳೆಯರ ಪ್ರವೇಶ ವಿರೋಧಿಸಿದ್ದಾರೆ. ಅಂತಿಮವಾಗಿ ಮಹಿಳಾ ಪತ್ರಕರ್ತೆಯರು ಶಬರಿಮಲೆಯಿಂದ ವಾಪಸ್ ತೆರಳಳು ನಿರ್ಧರಿಸಿದ್ದಾರೆ.