ಮಂಗಳೂರು, ಅ19(SS): ಹುಲಿ ಕುಣಿತ ಮತ್ತು ಸಮಾಜಮುಖಿ ಕೆಲಸಗಳ ಮೂಲಕ ಇಡೀ ಕರಾವಳಿಯಲ್ಲಿಯೇ ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್ಬಾಗ್ ಸಂಘಟನೆ ಸಂಚಲನ ಮೂಡಿಸಿದ್ದು, ಮಂಗಳೂರು ದಸರಾದ ಹುಲಿಕುಣಿತದಲ್ಲಿ ಈ ಭಾರಿ ಸಂಗ್ರಹವಾದ ಹಣವನ್ನು ಬಡ ರೋಗಿಗಳಿಗೆ ನೀಡಲು ನಿರ್ಧರಿಸಿದ್ದಾರೆ.
ಸಮಾಜಮುಖಿ ಕೆಲಸಗಳ ಮೂಲಕ ಜನಮಾನಸದಲ್ಲಿ ಚಿರಪರಿಚಿತವಾಗಿರುವ ಹೆಸರು ಉದಯ ಪೂಜಾರಿ ಬಲ್ಲಾಳ್ಬಾಗ್ ಈ ಕುರಿತು ದಾಯ್ಜಿವರ್ಲ್ಡ್ ವಾಹಿನಿ ಜೊತೆ ಮಾತನಾಡಿದ್ದು, ಹುಲಿಕುಣಿತದಲ್ಲಿ ಸಂಗ್ರಹವಾದ ಹಣವನ್ನು ಕ್ಯಾನ್ಸರ್ ಮತ್ತು ಹೃದಯಕ್ಕೆ ಸಂಬಂಧಿಸಿದ ರೋಗಿಗಳಿಗೆ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಉದಯಪೂಜಾರಿ ಬಲ್ಲಾಳ್ಬಾಗ್ ಅವರ ಕನಸಿನ ಕೂಸು ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್ಬಾಗ್ ಸಂಘಟನೆಯು ಕಳೆದ ನಾಲ್ಕು ವರುಷಗಳಿಂದ ದೀನ ದಲಿತರ, ಅಶಕ್ತರ ಆಶಾಕಿರಣವಾಗಿ ಕರಾವಳಿಯಲ್ಲಿ ಮೂಡಿ ಬರುತ್ತಿದೆ. ಕೆಲವೇ ಕೆಲವು ಸದಸ್ಯರಿಂದ ಅಂಬೆಗಾಲಿಡುತ್ತಾ ಹುಟ್ಟಿದ ಬಿರುವೆರ್ ಕುಡ್ಲ - ಫ್ರೆಂಡ್ಸ್ ಬಲ್ಲಾಳ್ಬಾಗ್ ಸಂಘಟನೆ ಕೇವಲ ಸಂಘಟನೆಯಾಗಿರದೇ ಮಾನವೀಯತೆಯ ನೆಲೆಯಲ್ಲಿ ಹೆಜ್ಜೆ ಹಾಕುತ್ತಿದೆ.
ಕರಾವಳಿಯ ಜನಪ್ರಿಯ ಸಂಘಟನೆಯಾಗಿರುವ ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್ಬಾಗ್ ಕೇವಲ ಮಂಗಳೂರು ದಸರಾ ಸಮಯದಲ್ಲಿ ಮಾತ್ರ ಹೆಸರುವಾಸಿಯಲ್ಲ. ಹುಲಿವೇಷದ ಹೊರತಾಗಿಯೂ ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್ಬಾಗ್ ಸಂಘಟನೆ ಜಾತ್ಯಾತೀತ ನೆಲೆಯಲ್ಲಿ ಸಮಾಜದ ಬಡ ಜನರಿಗೆ ನೆರವಿನ ಹಸ್ತ ಚಾಚುತ್ತಿದೆ.
2017ರ ಮಂಗಳೂರು ದಸರಾದಲ್ಲಿ ಹುಲಿ ಕುಣಿತ ಪ್ರದರ್ಶಿಸಿದ ಬಿರುವೆರ್ ಕುಡ್ಲ ಸಂಘಟನೆ, ಮಾನವೀಯತೆಯ ಕಾರ್ಯ ಮಾಡಿ ಜನ ಮೆಚ್ಚುಗೆ ಪಡೆದುಕೊಂಡಿದೆ. ಕೇವಲ ಒಂದೂವರೆ ಗಂಟೆಯಲ್ಲಿ ಹುಲಿ ಕುಣಿತದಿಂದ ಒಟ್ಟಾದ ಮೂರುವರೆ ಲಕ್ಷ ರೂಪಾಯಿಗಳನ್ನು 3 ಬಡ ಕುಟುಂಬಗಳಿಗೆ ಕೊಟ್ಟು ಇತರ ಸಂಘಟನೆಗಳಿಗೆ ಮಾದರಿಯಾಗಿ ಬೆಳೆದು ನಿಂತಿದೆ.
ಈ ಬಾರಿಯೂ ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್ಬಾಗ್ ಸಂಘಟನೆ ಜನರ ಕಷ್ಟಗಳಿಗೆ ಸ್ಪಂದಿಸುವ ಧ್ಯೇಯವನ್ನು ಇಟ್ಟುಕೊಂಡು, ಮಂಗಳೂರು ದಸರೆಯಲ್ಲಿ ಹೆಜ್ಜೆ ಹಾಕಲಿದೆ.