ಮಂಗಳೂರು, ಅ 19(SM): ಕಳೆದ 9 ದಿನಗಳ ಹಿಂದೆ ಮಂಗಳೂರಿನ ಪ್ರಸಿದ್ಧ ಕ್ಷೇತ್ರವಾದ ಶ್ರೀ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಟಾಪನೆಗೊಂಡು, ನವರಾತ್ರಿಯ ಸಂದರ್ಭ ನಿರಂತರ ಪೂಜೆಸಲ್ಪಟ್ಟ ಶಾರದಾ ಮಾತೆಯ ವಿಗ್ರಹದ ಭವ್ಯ ಮೆರವಣಿಗೆಗೆ ಶುಕ್ತವಾರ ಸಂಜೆ ಚಾಲನೆ ದೊರೆತಿದೆ.
ಮಂಗಳೂರಿನ ಪ್ರಸಿದ್ದ ಕ್ಷೇತ್ರವಾದ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 9ರಂದು ವಿಶೇಷ ಪೂಜೆಯ ಮೂಲಕ ಶಾರದೆ, ಗಣಪತಿ ಹಾಗೂ ನವದುರ್ಗೆಯರು ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿತ್ತು. ನವರಾತ್ರಿ ಆರಂಭದ ದಿನದಿಂದ ಇಂದಿನ ತನಕ ವಿಗ್ರಹಗಳಿಗೆ ನಿರಂತರ ಪೂಜೆ, ಪುನಸ್ಕಾರಗಳು ನಡೆಯುತ್ತಿದ್ದವು.
9 ದಿನಗಳ ಬಳಿಕ ಇಂದು ಶಾರದಾ ಮಾತೆ ಹಾಗೂ ನವದುರ್ಗೆಯ ವಿಗ್ರಹಗಳನ್ನು ಹೂಗಳಿಂದ ಶೃಂಗರಿಸಿ, ವಿಶೇಷ ಪೂಜೆ ಸಲ್ಲಿಸಿದ ಬಳಿಕ ವಿಗ್ರಹಗಳ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಕುದ್ರೋಳಿಯಿಂದ ಹೊರಟಿರುವ ಶಾರದಾ ಮಾತೆಯ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯುತ್ತದೆ. ಸಾವಿರಾರು ಸಂಖ್ಯೆಯ ಭಕ್ತಸಾಗರ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿದೆ.
ಇನ್ನು ಮೆರವಣಿಗೆಯಲ್ಲಿ ಹುಲಿವೇಷ, ಟ್ಯಾಬ್ಲೋಗಳು, ಕೇರಳದ ಚೆಂಡೆ, ನಾಸಿಕ್ ಬ್ಯಾಂಡ್ ಗಳು ವಿಶೇಷ ಆಕರ್ಷಣೆಯಾಗಿದೆ. ನಾಳೆ ಮುಂಜಾನೆ ವಿಗ್ರಹದ ವಿಸರ್ಜನೆ ನಡೆಯಲಿದೆ.