ಶಿವಮೊಗ್ಗ, ಅ 19(SM): ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಗೆಲ್ಲಲೇ ಬೇಕೆಂದು ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಪಣ ತೊಟ್ಟಿದೆ. ಹಳ್ಳಿಗಳಲ್ಲಿ ಪ್ರತಿ 20 ಮನೆಗೆ ಮೂವರ ತಂಡ ಪ್ರಚಾರ ನಡೆಸುವಂತೆ ತಂತ್ರ ರೂಪಿಸಲಾಗಿದೆ. ಆ ಮೂಲಕ ಬಿಜೆಪಿ ಭದ್ರಕೋಟೆ ಛಿದ್ರಗೊಳಿಸಲು ಕಾಂಗ್ರೆಸ್-ಜೆಡಿಎಸ್ ಮಾಸ್ಟರ್ ಪ್ಲಾನ್ ರೂಪಿಸಿಕೊಂಡಿದೆ.
ಶಿವಮೊಗ್ಗದ ಖಾಸಗಿ ಕಾಲೇಜು ಸಭಾಂಗಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಸಭೆ ನಡೆದಿದೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು, ಹಲವಾರು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಹಳ್ಳಿಗಳಲ್ಲಿ ಪ್ರತಿ 20 ಮನೆಗೆ ಮೂವರ ತಂಡವನ್ನು ರಚನೆ ಮಾಡಲು ನಿರ್ಧರಿಸಲಾಗಿದೆ. ತಂಡವು ಚುನಾವಣಾ ಪ್ರಚಾರ ನಡೆಸುವ ಜೊತೆಗೆ ಮತದಾನ ಮಾಡಿದ್ದಾರೆ ಎಂದು ಖಾತ್ರಿ ಪಡಿಸಿಕೊಳ್ಳಬೇಕು. ಬೂತ್ ಸಮಿತಿಯನ್ನು ರಚನೆ ಮಾಡಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾದರಿಯಲ್ಲಿ ಪ್ರಚಾರ ಕಾರ್ಯವನ್ನು ದೋಸ್ತಿ ಸರಕಾರ ನಡೆಸುತ್ತಿದೆ. ಪ್ರತಿ ತಾಲೂಕಿನ ಎರಡು ಕಡೆ ಬಹಿರಂಗ ಸಮಾವೇಶ ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ.
ನವೆಂಬರ್ 3ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಬಿ.ವೈ.ರಾಘವೇಂದ್ರ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅವರು ಕಣದಲ್ಲಿದ್ದಾರೆ. ನವೆಂಬರ್ 6ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಒಟ್ಟಿನಲ್ಲಿ ಶಿವಮೊಗ್ಗ ಕ್ಷೇತ್ರದ ಉಪ ಚುನಾವಣಾ ಕ್ಷೇತ್ರ ಸಾಕಷ್ಟು ಕುತೂಹಲದಿಂದ ಕೂಡಿದ್ದು, ಮೂರು ಪಕ್ಷಗಳಿಗೂ ಪ್ರತಿಷ್ಟೆಯ ಕಣವಾಗಿದೆ.