ಮಂಗಳೂರು, ಅ20(SS): ನನಗೆ ಬಹಳ ಆತ್ಮೀಯರಾದ ಮಂಜೇಶ್ವರ ಶಾಸಕ ಶ್ರೀ ಪಿ ಬಿ.ಅಬ್ದುಲ್ ರಜಾಕ್ ಅವರ ಅಕಾಲಿಕ ನಿಧನ ವಾರ್ತೆಯು ತನಗೆ ಅಪಾರ ದಿಗ್ಭ್ರಮೆ ಹಾಗೂ ಆಘಾತವನ್ನುಂಟು ಮಾಡಿದೆಯೆಂದು ಕರ್ನಾಟಕ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ಶ್ರೀ ಯು.ಟಿ.ಖಾದರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ನಿಷ್ಕಶ್ಮಲ ಮನಸ್ಸಿನಿಂದ ದುಡಿದ ಸ್ನೇಹಮಯಿ ಮತ್ತು ಉದಾರಮನಸ್ಕರಾದ ಪಿ.ಬಿ.ಅಬ್ದುಲ್ ರಜಾಕ್ ಅವರು ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದಾಗ ಅವರಿಗೆ ಬೇಕಾಗಿ ದುಡಿಯಲು ತಮಗೆ ಅವಕಾಶ ಲಭಿಸಿತ್ತು. ನಾನು ಸ್ಪರ್ಧಿಸಿದಾಗಲೂ ಅವರು ನಿರಂತರವಾಗಿ ನನ್ನ ಕ್ಷೇತ್ರದ ವಿವಿಧ ಪ್ರದೇಶಗಳಿಗೆ ತೆರಳಿ ಚುನಾವಣಾ ಪ್ರಚಾರ ಕೈಗೊಂಡಿದ್ದರು ಎಂದು ತಿಳಿಸಿದರು.
ಮಾತಿನಿಂದಲೂ, ಕೃತಿಯಿಂದಲೂ ಯಾರನ್ನೂ ನೋಯಿಸದ ಅವರು ತಮ್ಮ ಶಾಸಕರ ವೇತನವನ್ನು ಸ್ವಂತಕ್ಕಾಗಿ ಉಪಯೋಗಿಸದೆ ಬಡ ಮತ್ತು ನಿರ್ಗತಿಕರಿಗೆ ದಾನ ಮಾಡುತ್ತಿದ್ದ ಉದಾರ ಹೃದಯಿಗಳಾಗಿದ್ದರು. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸಲೀಸಾಗಿ ವ್ಯವಹರಿಸಬಲ್ಲವರಾಗಿದ್ದ ಪಿ.ಬಿ.ಅಬ್ದುಲ್ ರಜಾಕ್ ರಾಜಕೀಯ ವಿರೋಧಗಳ ಹೊರತಾಗಿಯೂ ಜನರೊಂದಿಗೆ ಆತ್ಮೀಯ ವೈಯಕ್ತಿಕ ಒಡನಾಟ ಇರಿಸಿಕೊಂಡಿದ್ದರು ಎಂದರು.
ಮಂಜೇಶ್ವರ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ತಾಲೂಕು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದ ಅವರು ಮಂಜೇಶ್ವರ ಬಂದರು, ಮಲೆನಾಡು ಹೆದ್ದಾರಿ ಮುಂತಾದ ಯೋಜನೆಗಳ ಜಾರಿಗೆ ಬಹುವಾಗಿ ಪರಿಶ್ರಮಿಸಿದ್ದರು. ಅಧಿಕೃತ ಕರ್ತವ್ಯ ನಿಮಿತ್ತ ರಾಯಚೂರಿನಲ್ಲಿರುವ ತಮಗೆ ಮೃತರ ಅಂತಿಮ ದರ್ಶನ ನಡೆಸಲು ಅಸಾಧ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶ್ರೀಯುತರ ನಿಧನದಿಂದ ತಾನು ಹಿರಿಯ ಹಿತೈಷಿ ಹಾಗೂ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದ್ದು, ತೀವ್ರ ಸಂತಾಪ ಸೂಚಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.