ಮಂಗಳೂರು, ಅ20(SS): ‘ಸ್ವಚ್ಛ ಭಾರತ್’ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೇ ಕೇವಲ ಬಾಯಿ ಮಾತಿಗಷ್ಟೇ ಎಂಬಂತಾಗಿದೆ. ಮಂಗಳೂರು ದಸರಾದ ಪ್ರಯುಕ್ತ ಶೋಭಾಯಾತ್ರೆ ಸಾಗಿದ್ದು, ದಾರಿಯುದ್ದಕ್ಕೂ ತ್ಯಾಜ್ಯದ ರಾಶಿ ತುಂಬಿ ಹೋಗಿದೆ.
ಕಡಲನಗರಿ ಮಂಗಳೂರಿನಲ್ಲಿ ಕಳೆದ 10 ದಿನಗಳ ಕಾಲ ನಡೆದ ನವರಾತ್ರಿ ಉತ್ಸವ ಮಂಗಳೂರು ದಸರಾ ಅದ್ದೂರಿ ಮೆರವಣಿಗೆ ಮೂಲಕ ನಿನ್ನೆ ಸಮಾಪನಗೊಂಡಿದೆ. ಇಂದು ಬೆಳಿಗ್ಗೆ ನವದುರ್ಗೆ, ಶಾರದೆ, ಗಣಪತಿ ವಿಸರ್ಜನೆಯೂ ನಡೆದಿದೆ. ಆದರೆ ನಿನ್ನೆ ದಸರಾ ಮೆರವಣಿಗೆ ವೀಕ್ಷಣೆ ಮಾಡಲು ಬಂದ ಲಕ್ಷಾಂತರ ಮಂದಿ ತಾವು ಉಪಯೋಗಿಸಿದ ತ್ಯಾಜ್ಯವನ್ನು ರಸ್ತೆ ಬದಿಯಲ್ಲೇ ಎಸೆದು ಹೋಗಿ ಸ್ವಚ್ಛ ಭಾರತ್ ಅಭಿಯಾನವನ್ನೇ ಅಣಕವಾಡಿದ್ದಾರೆ.
ದಸರಾ ಪ್ರಯುಕ್ತ ಶೋಭಾಯಾತ್ರೆ ಸಾಗಿದ ದಾರಿಯುದ್ದಕ್ಕೂ ಇಂದು ಬೆಳಿಗ್ಗೆ ಐಸ್ಕ್ರೀಂ ಕಪ್, ಏನೇನೋ ತಿಂಡಿಗಳ ಪ್ಲಾಸ್ಟಿಕ್ ಕವರ್ಗಳು, ಥರ್ಮೋಕೋಲ್ ಪ್ಲೇಟ್ಸ್ ಎಲ್ಲವೂ ಅನಾಥವಾಗಿ ಬಿದ್ದಿದ್ದು, ಟನ್ಗಟ್ಟಲೆ ತ್ಯಾಜ್ಯ ಬಿದ್ದಿದೆ. ಇದಕ್ಕೆಸಾಲದೆಂಬಂತೆ ಪಾಲಿಕೆ ಮಾರ್ಗದ ಪಕ್ಕದಲ್ಲಿ ಎಲ್ಲೂ ಕೂಡಾ ಕಸದ ಡಬ್ಬಿಗಳನ್ನು ಇಡದೇ ನಗರದ ಅಂದಗೆಡಿಸಲು ಕಾರಣವಾಗಿರುವುದು ವಿಷಾದಕರ ಸಂಗತಿ.
ಮಂಗಳೂರು ನಗರ ಪಾಲಿಕೆ ತ್ಯಾಜ್ಯ ನಿರ್ವಹಣೆ ಮಾಡುವ ಸಿಬ್ಬಂದಿಗಳು ಇಂದು ಕಸವನ್ನು ಸ್ವಚ್ಚಗೊಳಿಸುತ್ತಿರುವುದು ಕಂಡು ಬಂತು. ಮಂಗಳೂರಿನ ಶ್ರೀ ರಾಮಕೃಷ್ಣ ಮಿಶನ್, ಸಾಮಾಜಿಕ ಕಾರ್ಯಕರ್ತ ಸೌರಜ್ ಸೇರಿದಂತೆ ನಗರದ ಹಲವು ಸಂಘಸಂಸ್ಥೆಗಳ ಕಾರ್ಯಕರ್ತರು ಹಲವು ಸಮಯಗಳಿಂದ ಸ್ವಚ್ಛಭಾರತ್ ಅಭಿಯಾನದಲ್ಲಿ ಕೈಜೋಡಿಸಿದರೂ ಮಂಗಳೂರಿನಲ್ಲಿ ಇನ್ನೂ ಸ್ಥಿತಿ ಸುಧಾರಣೆಯಾಗದಿರುವುದು ವಿಷಾದಕರ.