ತಿರುವನಂತಪುರ, ಅ20(SS): ಸಾವಿರಾರು ವರುಷಗಳ ಇತಿಹಾಸವಿರುವ ಶಬರಿಮಲೆಗೆ ಮಹಿಳೆಯರ ಪ್ರವೇಶ ನಿರಾಕರಿಸಿ ಅಯ್ಯಪ್ಪನ ಭಕ್ತರು ನಡೆಸುತ್ತಿರುವ ಪ್ರತಿಭಟನೆಗೆ ದೇವಸ್ಥಾನದ ಅರ್ಚಕರೂ ಕೈಜೋಡಿಸಿರುವ ಪರಿಣಾಮ ಇದೇ ಮೊದಲ ಬಾರಿಗೆ ಪೂಜಾ ಕೈಂಕರ್ಯಗಳಿಗೆ ಒಂದು ಗಂಟೆಗೂ ಹೆಚ್ಚುಕಾಲ ಅಡಚಣೆಯುಂಟಾಗಿದೆ. ಶಬರಿಮಲೆಯ ಇತಿಹಾಸದಲ್ಲಿಯೇ ಇದು ಮೊದಲು ಎಂದು ದೇಗುಲದ ಅರ್ಚಕರು ತಿಳಿಸಿದ್ದಾರೆ.
ಅಯ್ಯಪ್ಪ ದೇವಾಲಯದ 500 ಮೀಟರ್ ಅಂತರದವರೆಗೂ ಕವಿತಾ ಹಾಗೂ ರೆಹಾನಾ ಪ್ರವೇಶಿಸಿದ್ದು, ಭಕ್ತರ ಪ್ರತಿಭಟನೆ ನಡುವೆಯೂ ಅವರು ಮುನ್ನುಗ್ಗಲು ಪ್ರಯತ್ನಿಸಿದಾಗ ದೇವಸ್ಥಾನ ಮುಖ್ಯ ಅರ್ಚಕ ರಾಜೀವಾರು ಕಂದರಾರು ಅವರ ನೇತೃತ್ವದಲ್ಲಿ ಅರ್ಚಕರು ಪೂಜಾ ಕೈಂಕರ್ಯಗಳನ್ನು ಬದಿಗೊತ್ತಿ ಖುದ್ದು ಅಖಾಡಕ್ಕೆ ಇಳಿದರು. ಪರಿಣಾಮ ಪೂಜಾ ಕೈಂಕರ್ಯಗಳಿಗೆ ಒಂದು ಗಂಟೆಗೂ ಹೆಚ್ಚುಕಾಲ ಅಡಚಣೆಯುಂಟಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಹಿಳೆಯರು ದೇವಾಲಯ ಪ್ರವೇಶಿಸಲು ಯತ್ನ ನಡೆಸಿದಾಗ, ಸಂಪ್ರದಾಯ ಮೀರಲು ಸಾಧ್ಯವಿಲ್ಲ. ಇಲ್ಲಿಂದ ಮಹಿಳೆಯರು ವಾಪಸ್ ಹೊರಟರೆ ಸರಿ, ಇಲ್ಲದಿದ್ದರೆ ದೇವಸ್ಥಾನಕ್ಕೆ ಬಿಗ ಹಾಕುತ್ತೇವೆ. ನಮ್ಮ ಪ್ರಾಣ ಹೋದರೂ ಸರಿ, ಪವಿತ್ರ 18 ಮೆಟ್ಟಿಲು ಹತ್ತಿ ಮಹಿಳೆಯರ ಪ್ರವೇಶಕ್ಕೆ ಆಸ್ಪದ ಕೊಡುವುದಿಲ್ಲ,'' ಎಂದು ಅರ್ಚಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಎಲ್ಲ ಘಟನೆಗಳಿಂದ ಅಯ್ಯಪ್ಪನ ಪೂಜಾ ಕೈಂಕರ್ಯಗಳಿಗೆ ಒಂದು ಗಂಟೆಗೂ ಹೆಚ್ಚು ಕಾಲ ಅಡ್ಡಿಯುಂಟಾಗಿದ್ದು, ಶಬರಿಮಲೆಯ ಇತಿಹಾಸದಲ್ಲಿಯೇ ಇದು ಮೊದಲು ಎಂದು ತಿಳಿದುಬಂದಿದೆ.