ತಿರುವನಂತಪುರಂ, ಅ20(SS): ಶ್ರೀ ಸ್ವಾಮಿ ಅಯ್ಯಪ್ಪನ ಪುಣ್ಯಕ್ಷೇತ್ರ ಶಬರಿ ಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ವಿವಾದ, ಸಂಘರ್ಷಗಳು ನಡೆಯುತ್ತಿರುವ ಬೆನ್ನಲ್ಲೇ, ಇತ್ತ ಅಯ್ಯಪ್ಪನ ದರ್ಶನಕ್ಕೆ ಆಗಮಿಸಿದ್ದ 9 ವರ್ಷದ ಬಾಲಕಿಯೊಬ್ಬಳು ಭಿತ್ತಿಪತ್ರವೊಂದನ್ನು ಹಿಡಿದುಕೊಂಡು ಎಲ್ಲರ ಚಿತ್ತ ತನ್ನತ್ತ ಸೆಳೆಯುವಂತೆ ಮಾಡಿದ್ದಾಳೆ.
ಮಧುರೈ ಮೂಲದ ಜನನಿ (9) ಭಿತ್ತಿಪತ್ರವೊಂದನ್ನು ಹಿಡಿದುಕೊಂಡು ಗಮನ ಸೆಳೆದ ಬಾಲಕಿ.
ಜನನಿ ತನ್ನ ತಂದೆಯೊಂದಿಗೆ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆಯಲು ಯಾತ್ರೆಗೆ ತೆರಳಿದ್ದು, ಕೈಯಲ್ಲೊಂದು ಭಿತ್ತಿಪತ್ರ ಹಿಡಿದುಕೊಂಡು ಬೆಟ್ಟ ಹತ್ತಿದ್ದಾಳೆ. ಭಿತ್ತಿಪತ್ರದಲ್ಲಿ ನನಗೆ 50 ವರ್ಷ ತುಂಬಿದ ಬಳಿಕ ಮತ್ತೆ ಶಬರಿಮಲೆಗೆ ಬರುತ್ತೇನೆ ಎಂದು ಬರೆಯಲಾಗಿದೆ.
ಈ ಕುರಿತು ಜನನಿ ತಂದೆ ಆರ್. ಸತೀಶ್ ಕುಮಾರ್ ಪ್ರತಿಕ್ರಿಯಿಸಿದ್ದು, ಸುಪ್ರೀಂ ಕೋರ್ಟ್ ಏನು ಆದೇಶ ಕೊಟ್ಟಿದೆ ಎಂದು ನನಗೆ ಗೊತ್ತಿಲ್ಲ. 10 ವರ್ಷದ ತುಂಬಿದ ಬಳಿಕ, 50 ವರ್ಷ ವಯಸ್ಸಾಗುವವರೆಗೆ ಕಾದು, ಆ ಬಳಿಕವಷ್ಟೇ ಆಕೆ ಶಬರಿಮಲೆಗೆ ಬರುತ್ತಾಳೆ ಎಂದಿದ್ದಾರೆ.