ಬೆಳಕಿನಲ್ಲಿ ಮಿಂಚಬೇಕೆನ್ನುವುದು ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಪ್ರತಿಯೊಬ್ಬರ ಬಯಕೆಯಾಗಿರುತ್ತದೆ. ಅದೆಷ್ಟೋ ಚೆಲುವೆಯರು ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿ ಸಿನಿ ಲೋಕವನ್ನು ಸೇರುತ್ತಾರೆ. ಆದರೆ ಇಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಚೆಲುವೆಯೊಬ್ಬರು ಅಂಥವರಿಗಿಂತ ಸ್ವಲ್ಪ ಭಿನ್ನವಾಗಿ ಕಾಣುತ್ತಾರೆ. ಅಂದ ಹಾಗೆ ಇವರ ಹೆಸರು ವಸುದಾ ರಾವ್.
ವಯಸ್ಸು 21. ಮೂಲತ: ಮುರುಡೇಶ್ವರದ ತಿಲಕ್ ರಾವ್ ಮತ್ತು ನಮ್ರತಾ ರಾವ್ ದಂಪತಿಗಳ ಮಗಳಾಗಿ ಜನಿಸಿದ ಇವರು ಬೆಳೆದದ್ದು ಮಂಗಳೂರಿನಲ್ಲಿ. ಇವರಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಬೇಕೆಂಬ ಕನಸು ಬಾಲ್ಯದಲ್ಲಿಯೇ ಇತ್ತು. ಅದರಂತೆ ಇವರು ಗ್ಲಾಮರ್ ಲೋಕಕ್ಕೆ ಕಾಲಿಟ್ಟರು ಕೂಡ. 2018ರಲ್ಲಿ ನಡೆದ ಮಿಸ್ ಮಂಗಳೂರು ಸ್ಪರ್ಧೆಯಲ್ಲಿ ವಸುದಾ ರಾವ್ ಮಿಸ್ ಫೋಟೊ ಜೆನಿಕ್ ಮತ್ತು ಫಸ್ಟ್ ರನ್ನರ್ ಆಪ್ ಆಗಿ ಹೊರಹೊಮ್ಮಿದರು.
ಎಲ್ಲ ಚೆಲುವೆಯರಿಗಿಂತ ಕೊಂಚ ಭಿನ್ನವಾಗಿ ಕಾಣಿಸಿಕೊಳ್ಳುವ ವಸುದಾ ರಾವ್ 2017ರಲ್ಲಿ ಬ್ಲಿಸ್ ಹೇರ್ ಸೆಲೂನ್ ಆಯೋಜಿಸಿದ ಲ್ಯಾಕ್ಸ್ ಆಫ್ ಲವ್ ಅಭಿಯಾನದಡಿ ಕ್ಯಾನ್ಸರ್ ರೋಗಿಗಳಿಗೆ ಹೆಚ್ಚಿನ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಕೇಶ ಮುಂಡನ ಮಾಡಿಸಿಕೊಂಡು ಸ್ವಯಂ ಪ್ರೇರಿತರಾಗಿ ತಮ್ಮ ಕೂದಲನ್ನು ದಾನ ಮಾಡಿದ್ದಾರೆ. ಹೌದು, ನಂಬಲು ತುಸು ಕಷ್ಟವೆನಿಸಿದರೂ ನಂಬಲೇಬೇಕು. ವಸುದಾ ರಾವ್ 2018ರ ಹೊಸ ವರುಷಕ್ಕೆ ಕ್ಯಾನ್ಸರ್ ರೋಗಿಗಳಿಗಾಗಿ ಕೂದಲು ದಾನ ಮಾಡುವ ನಿರ್ಧಾರ ಮಾಡಿದ್ದರು. ಅದರಂತೆ ಈ ಚೆಲುವೆ ತಮ್ಮ 15 ಇಂಚಿನ ಕೂದಲನ್ನು ಬ್ಲಿಸ್ ಹೇರ್ ಸೆಲೂನ್ ಗೆ ದಾನ ಮಾಡುವ ಮೂಲಕ ಕೇಶ ಮುಂಡನ ಮಾಡಿಸಿಕೊಂಡು ಇತರ ಚೆಲುವೆಯರಿಗೆ ಮಾದರಿಯಾಗಿ ಬೆಳೆದು ನಿಂತಿದ್ದಾರೆ.
ಮಂಗಳೂರಿನ ಎಸ್.ಡಿ.ಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಸುದಾ ರಾವ್ ಅವರಿಗೆ ಸಮಾಜ ಸೇವೆಯಲ್ಲಿ ಅತೀವ ಆಸಕ್ತಿ. ಅದರಲ್ಲೂ ಕ್ಯಾನ್ಸರ್ ರೋಗಿಗಳ ಮೇಲೆ ಗೌರವ. ಈ ಹಿನ್ನಲೆಯಲ್ಲಿ ನಾನು ಅಂತಹವರಿಗೆ ಸ್ವಯಂ ಪ್ರೇರಿತರಾಗಿಕೂದಲು ದಾನ ಮಾಡಲು ಮನಸ್ಸು ಮಾಡಿದೆ ಎಂದು ಹೇಳುತ್ತಾರೆ ವಸುದಾ ರಾವ್.
ಕ್ರೀಡೆ, ಭರತನಾಟ್ಯ,ಯೋಗ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ವಸುದಾ ರಾವ್ ಅವರಿಗೆ ಸ್ವಂತ ಎನ್.ಜಿ.ಒ ಸ್ಥಾಪಿಸಿ ಬಡವರ ಸೇವೆ ಮಾಡಬೇಕೆಂಬ ಕನಸಿದೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಚೆಲುವೆಯರಿಗೆ ಮಾದರಿಯಾಗಿ ಬೆಳೆದು ನಿಂತಿರುವ ಇವರ ಕನಸು ನನಸಾಗಲಿ ಎಂಬುವುದು ನಮ್ಮ ಆಶಯ.
ಸುಪ್ರೀತಾ ಸಾಲ್ಯಾನ್