ಕುಂದಾಪುರ,ಅ 21 (MSP): ಅಕ್ಟೋಬರ್ 16ರಿಂದ ಕರಾವಳಿ ನಿಯಂತ್ರಿತ ವಲಯವನ್ನು ಹೊರತುಪಡಿಸಿ (ಸಿಹಿನೀರು) ಮರಳುಗಾರಿಕೆಗೆ ಅನುಮತಿ ನೀಡುವುದಾಗಿ ಭರವಸೆ ನೀಡಿದ್ದ ಜಿಲ್ಲಾಡಳಿತ ಮರಳುಗಾರಿಕೆಗೆ ಅನುಮತಿ ನೀಡಿಲ್ಲ ಎಂದು ಆರೋಪಿಸಿ ನಡೆಯುತ್ತಿರುವ ಟಿಪ್ಪರ್ ಚಾಲಕ ಮಾಲಕರ ಸಂಘಟನೆಯ ಪ್ರತಿಭಟನೆಗೆ ಜಿಲ್ಲಾಡಳಿತ ಸೊಪ್ಪು ಹಾಕಿಲ್ಲ.
ಮರಳುಗಾರಿಕೆಗೆ ಆಗ್ರಹಿಸಿ ಅನುಮತಿ ನೀಡುವಂತೆ ಜಿಲ್ಲೆಯ ವಿವಿಧ ಕಡೆ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ನಾಲ್ಕನೇ ದಿನ ಪೂರೈಸಿದ್ದರೂ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲದಿರುವುದು ಪ್ರತಿಭಟನಾಕಾರರಿಗೆ ಬಿಸಿ ತುಪ್ಪವಾಗಿದೆ. ಇತ್ತ ಹೆಮ್ಮಾಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಮಾಜೀ ಶಾಸಕ ಕೆ. ಗೋಪಾಲ ಪೂಜಾರಿ, ಹಾಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹಾಗೂ ಜೆಡಿಎಸ್ ಮುಖಂಡ ಡಾ. ರವಿಶೆಟ್ಟಿ ಬೈಂದೂರು ಪ್ರತ್ಯೇಕವಾಗಿ ಭೇಟಿ ನೀಡಿ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಸುಕುಮಾರ ಶೆಟ್ಟಿ, ಮರಳು ಸಮಸ್ಯೆಯಿಂದ ಜಿಲ್ಲೆ ಕಂಗಾಲಾಗಿದೆ. ತಕ್ಷಣ ಅಧಿಕಾರಿಗಳು ಸ್ಪಂದಿಸಬೇಕು. ಇಲ್ಲದೇ ಇದ್ದರೆ ಜಿಲ್ಲೆಯ ಜನ ಗುಳೇ ಹೋಗಬೇಕಾದ ಸ್ಥಿತಿ ತಲುಪುತ್ತದೆ. ಚುನಾವಣೆ ಮುಗಿದ ಬಳಿಕವೂ ಮರಳುಗಾರಿಕೆಗೆ ಅವಕಾಶ ನೀಡದೇ ಇದ್ದರೆ ಪ್ರತಿಭಟನಾಕಾರರ ಜೊತೆಗೆ ತಾನೂ ಪ್ರತಿಭಟನೆ ನಡೆಸಬೆಕಾಗುತ್ತದೆ. ನಾನು ಜೈಲಿಗೆ ಹೋಗಲೂ ಸಿದ್ಧ ಎಂದು ಎಚ್ಚರಿಸಿದ್ದಾರೆ.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಜಿಲ್ಲೆಯ ಸಮಸ್ಯೆಗೆ ಪೂರಕವಾಗಿ ಸರ್ಕಾರ ಸ್ಪಂದಿಸಬೇಕು. ಜನರ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಜೆಡಿಎಸ್ ಮುಖಂಡ ರವಿ ಶೆಟ್ಟಿ ಪ್ರತಿಕ್ರಿಯಿಸಿ, ನಾನು ಹೋರಾಟದ ಮೂಲಕವೆ ಸಾಮಾಜಿಕ ಸೇವೆಗೆ ಬಂದವನು. ಆನರ ಸಮಸ್ಯೆಗಳ ಪರಿಹಾರಕ್ಕೆ ಪ್ರತಿಭಟನಾಕಾರರ ಜೊತೆಗೆ ತಾನೂ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದರು.
ನಂತರ ಮಾತನಾಡಿದ ಕುಂದಾಪುರ ಟಿಪ್ಪರ್ ಮಾಲಕರ ಸಂಘದ ಅಧ್ಯಕ್ಷ ಗುಣಕಾರ್ ಶೆಟ್ಟಿ, ಜಿಲ್ಲೆಯಲ್ಲಿ ಮರಳುಗಾರಿಕೆ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಮಗ್ರ ಮರಳು ನೀತಿ ಜಾರಿಗೆ ಬರಬೇಕು ಹಾಗೂ ಜಿಲ್ಲೆಯ ಎಲ್ಲಾ ಕಡೆಯಲ್ಲೂ ಮರಳು ತಕ್ಷಣ ಪ್ರಾರಂಭಿಸಬೇಕು. ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸಿದರೂ ಜಿಲ್ಲಾಡಳಿತ ಮೌನವಹಿಸಿದೆ. ಜಿಲ್ಲೆಯಲ್ಲಿ ಸಿಹಿನೀರು ಹಾಗೂ ಉಪ್ಪು ನಿರಿನ ಮರಳುಗಾರಿಕೆಗೆ ಜಿಲ್ಲಾಡಳಿತ ಅನುಮತಿ ನೀಡದೇ ಇದ್ದರೆ ಅಕ್ಟೋಬರ್ ೨೭ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ವಾಹನಗಳ ಸಮೇತ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗಡುವು ನೀಡಿದ್ದಾರೆ.