ತಿರುವನಂತಪುರಂ, ಅ 21 (MSP): ಭಾರೀ ವಿರೋಧದ ನಡುವೆಯೂ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದ ರೆಹಾನಾ ಫಾತಿಮಾ ಸುಲೈಮಾನ್ ಹಿಂದೊಮ್ಮೆ ಸಾರ್ವಜನಿಕ ಸ್ಥಳದಲ್ಲಿ ಮನಸೋಯಿಚ್ಛೆ ಮುತ್ತಿಕ್ಕಲು ಪ್ರಚೋದಿಸುವ ಕಿಸ್ ಆಫ್ ಲವ್ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾಕೆ ತಿಳಿದುಬಂದಿದೆ.
ಕಿಸ್ ಆಫ್ ಲವ್ ಕಾರ್ಯಕ್ರಮವೊಂದನ್ನು ಆಯೋಜಿಸಿ ವಿವಾದಕ್ಕೆ ಕಾರಣವಾಗಿದ್ದ ರೆಹಾನಾ ಫಾತಿಮಾ ಅಯ್ಯಪ್ಪ ಮಾಲಾಧಾರಿಯ ಗೆಟಪ್ನಲ್ಲಿ ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ್ದಳು. ಇನ್ನು ಕೇರಳ ಸರ್ಕಾರ ರೆಹಾನಾಗೆ ಅಯ್ಯಪ್ಪ ಭಕ್ತಗಣದಿಂದ ರಕ್ಷಣೆ ನೀಡಲೆಂದು 250 ಪೊಲೀಸ್ ಕಮಾಂಡೋಗಳ ವ್ಯವಸ್ಥೆ ಮಾಡಲಾಗಿತ್ತು. ತಲೆಗೆ ಹೆಲ್ಮೆಟ್ ಹಾಗೂ ಪೊಲೀಸರ ರಕ್ಷಾ ಕವಚ ತೊಟ್ಟಿದ್ದ ರೆಹಾನಾ ದೇಗುಲ ಪ್ರವೇಶಕ್ಕೆ ಮುಂದಾಗಿದ್ದಳು. ಈ ಮಹಿಳೆಯರನ್ನು ದೇಗುಲಕ್ಕೆ ಕರೆದುಕೊಂಡು ಹೋಗಲು ಖುದ್ದು ಐಜಿ ಶ್ರೀಜಿತ್ ಮುಂದೆ ಬಂದಿದ್ದರು. ಗುಡ್ಡವನ್ನು ಹತ್ತಿದ ಬಳಿಕ ಈ ಬಣಕ್ಕೆ ದೊಡ್ಡ ಪ್ರತಿರೋಧ ವ್ಯಕ್ತವಾಗಿತ್ತು.
ಆದರೆ ದೇವಸ್ಥಾನದ ಅರ್ಚಕರು ಭಾರೀ ವಿರೋಧ ವ್ಯಕ್ತಪಡಿಸಿ ಯಾರಾದರೂ ಒಳ ಹೋಗಲು ಯತ್ನಿಸಿದರೆ ಗರ್ಭಗುಡಿಗೆ ಬೀಗ ಜಡಿದು ಪಂದಳಂ ರಾಜಮನೆತನಕ್ಕೆ ಬೀಗ ಒಪ್ಪಿಸುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ರೆಹಾನಾ ಹಾಗೂ ಹೈದರಾಬಾದ್ ಮೂಲದ ಮಹಿಳಾ ವರದಿಗಾರ್ತಿ ಕವಿತಾ ಕೋಶಿ ದೇಗುಲ ಪ್ರವೇಶಿಸದೆ ವಾಪಸ್ ಆಗಿದ್ದರು