ನವದೆಹಲಿ, ಅ 21 (MSP): ರಷ್ಯದೊಂದಿಗೆ ಭಾರತವು ಮಾಡಿಕೊಂಡಿರುವ ಎಸ್-400 ಡಿಫೆನ್ಸ್ ಮಿಸೈಲ್ ಖರೀದಿ ಒಪ್ಪಂದದ ಬಗ್ಗೆ ಮೊದಲಿನಿಂದಲೂ ಖ್ಯಾತೆ ತೆಗೆದಿರುವ ಅಮೇರಿಕಾ, ಭಾರತ ರಷ್ಯಾದಿಂದ ಯುದ್ದ ವಿಮಾನ ಖರೀದಿಸಿದರೆ ಭಾರತದ ಮೇಲೂ ಆರ್ಥಿಕ ನಿರ್ಬಂಧ ಹೇರಬೇಕಾಗುತ್ತದೆ ಎಂದು ಹಿಂದಿನಿಂದಲೂ ಬೆದರಿಸುತ್ತಲೇ ಬಂದಿತ್ತು. ಆದರೆ ಈ ಬೆದರಿಕೆಗೆ ಬಗ್ಗದ ಭಾರತ ಮಿಸೈಲ್ ಖರೀದಿ ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ ಇದೀಗ ಅಮೇರಿಕಾ ನಿರ್ಬಂಧವನ್ನು ತಪ್ಪಿಸಿಕೊಳ್ಳಬೇಕಾದರೆ ನಮ್ಮಿಂದಲೂ ಯುದ್ದ ವಿಮಾನ ಖರೀದಿಸಿ ಎನ್ನುವ ಒತ್ತಡವನ್ನು ಭಾರತದ ಮೇಲೆ ಹೇರತೊಡಗಿದೆ.
'ಕಾಟ್ಸಾ ಕಾಯ್ದೆಯ ದಿಗ್ಬಂಧನದಿಂದ ತಪ್ಪಿಸಿಕೊಳ್ಳಬೇಕಾದರೆ, ಅಮೆರಿಕದ ಎಫ್-16 ಯುದ್ಧ ವಿಮಾನಗಳನ್ನು ಖರೀದಿಸಿ' ಎಂಬ ಒತ್ತಡತಂತ್ರವನ್ನು ಅಮೇರಿಕಾ ಭಾರತದ ಮೇಲೆ ಪ್ರಯೋಗಿಸಿದೆ. ಈ ಸಂಬಂಧ ಭಾರತಕ್ಕೆ ಅನೌಪಚಾರಿಕವಾಗಿ ಸೂಚನೆ ನೀಡಿರುವ ಅಮೆರಿಕ, ಒಂದು ವೇಳೆ ಅಮೆರಿಕದ ಯುದ್ಧ ವಿಮಾನ ಖರೀದಿಸಿದ್ದೇ ಆದಲ್ಲಿ ನಿಮ್ಮ ಮೇಲೆ ಹೇರಬೇಕೆಂದಿರುವ ದಿಗ್ಬಂಧನ ಮನ್ನಾ ಮಾಡುತ್ತೇವೆ ಎಂದಿದೆ. ಆದರೆ, ಇದುವರೆಗೆ ಭಾರತ ಅಮೆರಿಕದ ಈ ಆಮಿಷಕ್ಕೆ ಯಾವುದೇ ರೀತಿಯ ಸಮ್ಮತಿಯನ್ನು ನೀಡಿಲ್ಲ.
ಈ ತಿಂಗಳ ಆರಂಭದಲ್ಲಿ ಭಾರತ, ರಷ್ಯಾದಿಂದ ಅತ್ಯಾಧುನಿಕ ಎಸ್-400 ಪ್ರತಿರೋಧಕ ಕ್ಷಿಪಣಿಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿದೆ. ಇದು ಅಮೆರಿಕದ ತಲೆನೋವಿಗೆ ದೊಡ್ಡ ಕಾರಣವಾಗಿದೆ. ಸದ್ಯ ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾ ಜತೆ ಜಗತ್ತಿನ ಯಾವುದೇ ದೇಶಗಳೂ ಶಸ್ತ್ರಾಸ್ತ್ರ ಖರೀದಿ ಮಾಡಬಾರದು ಎಂದು ಅಮೇರಿಕಾ ನಿಯಮ ರೂಪಿಸಿದೆ. ಇದನ್ನು ಉಲ್ಲಂಘಿಸಿರುವ ಭಾರತ, ರಷ್ಯಾದಿಂದ ಪ್ರತಿರೋಧಕ ಕ್ಷಿಪಣಿಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ.