ಬೆಳಗಾವಿ,ಅ 21 (MSP):ಹ್ಯಾಂಡ್ ಗ್ರೆನೇಡ್ ಸ್ಪೋಟವಾಗುವ ಮುನ್ನ ತಾವು ಪ್ರಯಾಣಿಸುತ್ತಿದ್ದ ಕಂಟೇನರ್ ನಿಂದ ಹೊರಕ್ಕೆ ಜಿಗಿದು 20 ಜನರ ಪ್ರಾಣ ಕಾಪಾಡಿ ಬೆಳಗಾವಿ ಗೋಕಾಕ ಮೂಲದ ಉಮೇಶ್ ಹೆಳವರ್(25) ಹುತಾತ್ಮರಾಗಿದ್ದಾರೆ. ಈ ಮಣಿಪುರ ಇಂಪಾಲ್, ನಾಗಂಪಾಲ್ ಎನ್ನುವಲ್ಲಿ ಅ.20 ರ ಶನಿವಾರ ಸಂಜೆ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ತಮಿಳುನಾಡು ಮೂಲದ ಯೋಧ ರಾಮರಾಜನ್ ಎಂಬವರಿಗೆ ಗಂಭೀರ ಗಾಯಗಳಾಗಿದೆ.
ಶನಿವಾರ ಸಂಜೆ ಇಂಪಾಲ್ ಮಾರುಕಟ್ಟೆಯಿಂದ ದ ಹ್ಯಾಂಡ್ ಗ್ರೆನೇಡ್ ಲೋಡ್ ಮಾಡಿ ಕಾಂಗ್ಲಾಟೊಂಬಿ ತರಬೇತಿ ಶಿಬಿರಕ್ಕೆ ತೆರಳುತ್ತಿದ್ದಾಗ ಗ್ರೆನೇಡ್ ಸ್ಪೋಟವಾಗಿದೆ. ಆ ಸಮಯಕ್ಕೆ ಸರಿಯಾಗಿ ಯೋಧ ಉಮೇಶ್ ತಾವಿದ್ದ ಕಂಟೇನರ್ ನಿಂದ ಹೊರಕ್ಕೆ ಜಿಗಿದಿದ್ದಾರೆ. ಗ್ರೆನೇಡ್ ಸಮೇತ ಹೊರಕ್ಕೆ ಜಿಗಿದ ಉಮೇಶ್ ವಾಹನದಲ್ಲಿದ್ದ ಸುಮಾರು 20 ಮಂದಿಯ ಪ್ರಾಣ ರಕ್ಷಿಸಿ ತಾವು ಪ್ರಾಣತ್ಯಾಗ ಮಾಡಿದ್ದಾರೆ. ಇವರು ಕಳೆದ ಮೂರು ವರ್ಷಗಳ ಹಿಂದೆ ಸಿಆರ್ಪಿಎಫ್ಗೆ ಸೇರ್ಪಡೆಯಾಗಿದ್ದರು ಎಂದು ತಿಳಿದು ಬಂದಿದೆ. ಭಾನುವಾರ ವೀರ ಯೋಧ ಉಮೇಶ್ ಪಾರ್ಥಿವ ಶರೀರ ಗೋಕಾಕ್ ತಲುಪುವ ಸಾಧ್ಯತೆ ಇದೆ. ಸುದ್ದಿ ತಿಳಿದ ಯೋಧರ ಕುಟುಂ, ಸ್ನೇಹಿತರು ಶೋಕತಪ್ತರಾಗಿದ್ದಾರೆ.