ಕೇರಳ,ಅ 21 (MSP): ಭಾರೀ ವಿರೋಧದ ನಡುವೆಯೂ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದ ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾ ಸುಲೈಮಾನ್ ಅವರನ್ನು ಕೇರಳ ಮುಸ್ಲಿಮ್ ಜಮಾತ್ ಕೌನ್ಸಿಲ್ ಇಸ್ಲಾಂನಿಂದ ಉಚ್ಛಾಟಿಸಿದೆ. ಪೊಲೀಸ್ ಭದ್ರತೆಯೊಂದಿಗೆ ಆಕೆ ದೇವಾಲಯ ಪ್ರವೇಶಿಸಲು ವಿಫಲ ಯತ್ನ ನಡೆಸಿದ್ದರು. ಅಯ್ಯಪ್ಪ ಭಕ್ತಗಣದಿಂದ ರಕ್ಷಣೆ ನೀಡಲೆಂದು 250 ಪೊಲೀಸ್ ಕಮಾಂಡೋಗಳ ವ್ಯವಸ್ಥೆ ಮಾಡಲಾಗಿತ್ತು. ತಲೆಗೆ ಹೆಲ್ಮೆಟ್ ಹಾಗೂ ಪೊಲೀಸರ ರಕ್ಷಾ ಕವಚ ತೊಟ್ಟಿದ್ದ ರೆಹಾನಾ ದೇಗುಲ ಪ್ರವೇಶಕ್ಕೆ ಮುಂದಾಗಿದ್ದಳು. ಆದರೆ ಭಕ್ತರ ಹಾಗೂ ಅರ್ಚಕರ ಭಾರಿ ಪ್ರತಿಭಟನೆಗಳ ನಡುವೆ ಫಾತಿಮಾ ಅಯ್ಯಪ್ಪ`ದೇಗುಲ ಪ್ರವೇಶಿಸಲು ಸಾಧ್ಯವಾಗಲಿಲ್ಲ.
ಇದೀಗ ಕೇರಳ ಮುಸ್ಲಿಮ್ ಜಮಾತ್ ಕೌನ್ಸಿಲ್ ಆಕೆ ಹಾಗೂ ಆಕೆಯ ಕುಟುಂಬವನ್ನು ಸದಸ್ಯತ್ವದಿಂದ ಹೊರಹಾಕುವಂತೆ ಎರ್ನಾಕುಲಂ ಸೆಂಟ್ರಲ್ ಮುಸ್ಲಿಂ ಕೌನ್ಸಿಲ್ ಜಮಾತ್ ಗೆ ನಿರ್ದೇಶಿಸಿದೆ. ರಹನಾ ಲಕ್ಷಾಂತರ ಹಿಂದೂ ಭಕ್ತರ ಮನನೋಯಿಸುವ ಕೆಲಸ ಮಾಡಿದ್ದಾಳೆ.ಆಕೆಯ ನಡವಳಿಕೆ ಹಿಂದೂ ಸಮುದಾಯದ ಆಚರಣೆಗಳಿಗೆ ವಿರುದ್ಧವಾಗಿದೆ ಎಂದು ಪತ್ರಿಕಾ ಹೇಳಿಕೆಯನ್ನು ಕೇರಳ ಮುಸ್ಲಿಮ್ ಜಮಾತ್ ಕೌನ್ಸಿಲ್ ಬಿಡುಗಡೆ ಮಾಡಿದೆ.
ಹಿಂದೂ ನಂಬಿಕೆಗಳಿಗೆ ಆಕೆ ಧಕ್ಕೆ ತಂದಿದ್ದಾಳೆ ಎಂದು ಈ ಹಿಂದೆಯೇ ಹಲವರು ಆರೋಪಿಸಿದ್ದರು. ಅಲ್ಲದೆ, ಸಿಟ್ಟಿಗೆದ್ದ ಕೆಲ ದುಷ್ಕರ್ಮಿಗಳು ಅವರ ಮನೆಗೆ ಕಲ್ಲು ಹೊಡೆದಿದ್ದರು. ಈಗ ಸ್ವತ: ಹಿಂದೂ ನಂಬಿಕೆಗಳಿಗೆ ಧಕ್ಕೆ ತರಲು ಯತ್ನಿಸಿದ್ದಕ್ಕೆ ಕೇರಳ ಮುಸ್ಲಿಂ ಮಂಡಳಿ ಆಕೆಯನ್ನು ಇಸ್ಲಾಂ ಧರ್ಮದಿಂದ ಹೊರದಬ್ಬಿದೆ.