ಮಂಗಳೂರು, ಅ 21(SM): ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಹುಭಾಷಾ ನಟಿ ರಾಗಿಣಿ ದ್ವಿವೇದಿ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರಿನ ಮಂಗಳಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದೇವರ ಪೂಜೆಯಲ್ಲಿ ಯಾವತ್ತೂ ತಾರತಮ್ಯ ಮಾಡಬಾರದು ಎಂದಿದ್ದಾರೆ.
ಪೂಜೆ, ಭಕ್ತಿ ವಿಚಾರದಲ್ಲಿ ದೇವರು ಗಂಡು - ಹೆಣ್ಣೆಂಬ ಭೇದ ಮಾಡಲ್ಲ. ಹಾಗೆಂದು ಮಹಿಳೆಯರ ಋತುಚಕ್ರ ಹೆಸರಲ್ಲಿ ಪ್ರವೇಶ ನಿಷೇಧಿಸುವುದು ತಪ್ಪು. ಆದರೆ ಸಂಸ್ಕೃತಿ, ಸಂಪ್ರದಾಯ ವಿಚಾರ ಇದ್ದರೆ ಚರ್ಚೆ ನಡೆಯುವುದು ಉತ್ತಮ. ಆದರೆ ಸಂಪ್ರದಾಯವನ್ನು ಯಾರೂ ಪ್ರಶ್ನೆ ಮಾಡಲು ಮುಂದಾಗಬಾರದು ಎಂದಿದ್ದಾರೆ.
ಇನ್ನು ಮೀಟೂ ಅಭಿಯಾನದ ಬಗ್ಗೆ ಕೂಡ ನಟಿ ದ್ವಿವೇದಿ ಪ್ರತಿಕ್ರಿಯೆ ನೀಡಿದ್ದಾರೆ. ಮೀಟೂ ಅಭಿಯಾನ ದೊಡ್ಡ ಮಟ್ಟಿಗೆ ಬೆಳೆಯುತ್ತಿದೆ. ಇದರಿಂದಾಗಿ ಜನರು ನೋವುಗಳನ್ನು ಆಚೆ ಬಂದು ಹೇಳಿಕೊಳ್ಳುತ್ತಾರೆ. ಶೋಷಣೆ ಯಾವುದೇ ರೀತಿಯಲ್ಲಿ ನಡೆದರೂ ಅದು ಶೋಷಣೆಯೇ.
ಆದರೆ ಮೀ ಟೂ ಹೆಸರಲ್ಲಿ ಕೆಲವರು ದುರ್ಲಾಭ ಪಡೀತಿದ್ದಾರೆ. ಶ್ರುತಿ ಹರಿಹರನ್ ಒಳ್ಳೆಯ ಹುಡುಗಿ, ಅನಗತ್ಯವಾಗಿ ಯಾವುದನ್ನೂ ಹೇಳಿಕೊಳ್ಳಲ್ಲ. ನಿಜವಾಗಿ ಅಂತಹ ಘಟನೆ ನಡೆದಿದ್ದರೆ ತಪ್ಪೆಸಗಿದವರಿಗೆ ಶಿಕ್ಷೆಯಾಗಬೇಕು. ಹಾಗಂತ, ಯಾರು ಕೂಡ ಮೀ ಟು ಹೆಸರನ್ನು ಸ್ವಾರ್ಥಕ್ಕೆ ಬಳಸುವುದು ಸರಿಯಲ್ಲ ಎಂದಿದ್ದಾರೆ.