ಉಡುಪಿ, ಅ 21(SM): ಧರ್ಮ ಟ್ರಸ್ಟ್ ವತಿಯಿಂದ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ಜಿಲ್ಲಾ ಘಟಕ ಸಹಭಾಗಿತ್ವದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ನವೆಂಬರ್ 1ರಂದು ಎಂಜಿಎಂ ಕಾಲೇಜಿನ ಮೈದಾನದಲ್ಲಿ ‘ಅಯ್ಯಪ್ಪ ಸ್ವಾಮಿ ಮಹಾ ಸಹಸ್ರಾರ್ಚನೆ ವಿಶೇಷ ಪೂಜೆ’ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ಜಿಲ್ಲಾ ಅಧ್ಯಕ್ಷ, ಕಾರ್ಯಕ್ರಮ ಸಂಯೋಜಕ ಗಿರೀಶ್ ಜಿ.ಎನ್ ತಿಳಿಸಿದರು.
ಭಾನುವಾರ ಶ್ರೀಕೃಷ್ಣಮಠ ಮಧ್ವಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪಂದಳ ರಾಜಮನೆತನದ ಪ್ರತಿನಿಧಿ, ಪಂದಳ ಪ್ಯಾಲೇಸ್ ಟ್ರಸ್ಟ್ನ ಅಧ್ಯಕ್ಷ ಶಶಿಕುಮಾರ ವರ್ಮ ಅಂದು ಉಡುಪಿಗೆ ಆಗಮಿಸಲಿದ್ದು, ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಬಳಿಕ ಭಕ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 1ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ನವೆಂಬರ್ 1 ರಂದು ಮಧ್ಯಾಹ್ನ 3ಗಂಟೆಗೆ ನಗರದ ಬಿಗ್ ಬಜಾರ್ ರಸ್ತೆಯಿಂದ ಅಯ್ಯಪ್ಪ ಭಜನೆ, ನಾಮ ಸಂಕೀರ್ತನೆಯೊಂದಿಗೆ ಎಂಜಿಎಂ ಮೈದಾನದವರೆಗೆ ಬೃಹತ್ ಕಾಲ್ನಡಿಗೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು. ಧರ್ಮಟ್ರಸ್ಟ್ ಮೂಲಕ ಈಗಾಗಲೆ ಕೇರಳದಲ್ಲಿ 2 ಮಹಾ ಸಹಸ್ರಾರ್ಚನೆ ಕಾರ್ಯಕ್ರಮ ನಡೆದಿದೆ. ಹೊರರಾಜ್ಯದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ನಡೆಯುತ್ತಿದೆ. ಮುಂದಿನ ವರ್ಷಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿಯಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.