ಗುವಾಹಟಿ, ಅ 21(SM): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಪಡೆ ಎಂಟು ವಿಕೆಟ್ಗಳ ಜಯ ಸಾಧಿಸಿದೆ. ಆ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
323 ರನ್ಗಳ ಬೃಹತ್ ಮೊತ್ತದ ಗುರಿ ಪಡೆದು ಬ್ಯಾಟಿಂಗ್ಗೆ ಇಳಿದ ಟೀಮ್ ಇಂಡಿಯಾ, ಓಪನರ್ ಶಿಖರ್ ಧವನ್ ವಿಕೆಟ್ ನ್ನು ಅತ್ಯಂತ ವೇಗವಾಗಿ ಒಪ್ಪಿಸಿತು. ಕೇವಲ ೪ ರನ್ನಿಗೆ ಧವನ್ ಫೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ನಂತರ ರೋಹಿತ್ ಶರ್ಮಾ ಜೊತೆಯಾದ ನಾಯಕ ಕೊಹ್ಲಿ ಭರ್ಜರಿ ಇನ್ನಿಂಗ್ಸ್ ಕಟ್ಟಿದರು.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಎರಡನೇ ವಿಕೆಟ್ಗೆ ತಂಡಕ್ಕೆ 246 ರನ್ ಗಳ ಜತೆಯಾಟವಾಡಿದರು. ಈ ನಡುವೆ ಕೊಹ್ಲಿ ಶತಕ ಸಿಡಿಸಿದರೆ ಅತ್ತ ರೋಹಿತ್ ಶರ್ಮಾ ಸಹ ನಾಯಕನಿಗೆ ಸೆಂಚುರಿಯಲ್ಲಿ ಸಾಥ್ ನೀಡಿದರು.
ವಿರಾಟ್ ಕೊಹ್ಲಿ 107 ಎಸೆತಗಳನ್ನು ಎದುರಿಸಿ 21 ಬೌಂಡರಿ ಹಾಗೂ ಎರಡು ಸಿಕ್ಸರ್ ಸಹಿತ 140 ರನ್ ಗಳಿಸಿದರು. ರೋಹಿತ್ ಶರ್ಮಾ 117 ಎಸೆತದಲ್ಲಿ ಎದುರಿಸಿ ಭರ್ಜರಿ ಎಂಟು ಸಿಕ್ಸರ್ ಹಾಗೂ 16 ಬೌಂಡರಿ ಸಹಿತ 152 ರನ್ ಬಾರಿಸಿ ತಂಡವನ್ನು ಜಯದತ್ತ ಕೊಂಡೊಯ್ದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದಿದ್ದ ವಿಂಡೀಸ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕ ಚಂದ್ರಪಾಲ್ ಹೇಮರಾಜ್ 9 ರನ್ನಿಗೆ ಪೆವಿಲಿಯನ್ ಸೇರಿದರು. ಕೀರನ್ ಪೊವೆಲ್ 51 ರನ್ ಗಳಿಸಲಷ್ಟೇ ಶಕ್ತರಾದರು.
ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾದ ಶಿಮ್ರೋನ್ ಹೇಟ್ಮೇರ್ ಆಕರ್ಷಕ ಶತಕ ಸಿಡಿಸಿ ತಂಡದ ಮೊತ್ತ ಹೊಚ್ಚಿಸಲು ನೆರವಾದರು. 78 ಎಸೆತದಲ್ಲಿ ಆರು ಸಿಕ್ಸರ್ ಹಾಗೂ ಆರು ಬೌಂಡರಿ ಮೂಲಕ 106 ರನ್ ಸಿಡಿಸಿದರು.
ಕೊನೆಯಲ್ಲಿ ಬಿಶೂ ಹಾಗೂ ರೋಚ್ ಬಿರುಸಿನ ಆಟದ ಮೂಲಕ ತಂಡದ ಮೊತ್ತವನ್ನು 320ರ ಗಡಿ ದಾಟಿಸಿದರು.