ಮಂಗಳೂರು, ಅ22 (MSP): ಕಳೆದ 8 ತಿಂಗಳ ಹಿಂದೆ ನಗರದಲ್ಲಿ ನಡೆದಿದ್ದ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಪೊಲೀಸರ ತನಿಖೆಯ ವೇಳೆ ಹನಿಟ್ರ್ಯಾಪ್ ಮಾಡಿರುವ ತಂಡದ ಜತೆಗೆ ಸಿಸಿಬಿ ಸಿಬ್ಬಂದಿಯೊಬ್ಬರ ನಂಟಿರುವುದು ಬಹಿರಂಗವಾಗಿದೆ.
ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಳಿನಿ ಮಾರ್ಚ್ 20ರಂದು, ಮೇರಿಹಿಲ್ನ ಮನೆಯೊಂದಕ್ಕೆ ಯುವತಿಯನ್ನು ಕರೆದೊಯ್ದು ನಿವೃತ್ತ ಅಧಿಕಾರಿಯ ಮಸಾಜ್ ಆರಂಭಿಸಿದ್ದಳು. ಅಷ್ಟರಲ್ಲಿ ಇಬ್ಬರು ಯುವಕರು ಅಕ್ರಮವಾಗಿ ಆ ಮನೆಗೆ ಪ್ರವೇಶ ಮಾಡಿ, ಅಧಿಕಾರಿಯ ನಗ್ನ ವೀಡೀಯೊ್ ರೆಕಾರ್ಡ್ ಮಾಡಿ ಬೆದರಿಕೆ ಹಾಕಿ 10 ಲಕ್ಷ ರೂಪಾಯಿ ಬೇಡಿಕೆಯಿಟ್ಟಿದ್ದರು. ಇದರಿಂದ ಬೆಚ್ಚಿಬಿದ್ದ ಅಧಿಕಾರಿ ತಕ್ಷಣ 3 ಲಕ್ಷ ನೀಡಿದ್ದರು. ಈ ಕುರಿತು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 6 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.
ಪ್ರಕರಣದ ವಿಸ್ತೃತ ತನಿಖೆ ನಂತರ ನಳಿನಿ ಕರೆ ಮಾಡುತ್ತಿದ್ದ ಮೊಬೈಲ್, ನಗರ ಸಿಸಿಬಿ ಸಿಬ್ಬಂದಿಯದ್ದು ಎನ್ನುವುದು ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ನಗರ ಪೊಲೀಸ್ ಕಮಿಷನರ್ ಅವರು, ಸಿಸಿಬಿ ಸಿಬ್ಬಂದಿಗೆ ನೋಟಿಸ್ ನೀಡಿದ್ದಾರೆ. ಇದಕ್ಕೆ ಉತ್ತರಿಸಿದ್ದ ಸಿಬ್ಬಂದಿ, ‘ನಳಿನಿ ಈ ಹಿಂದೆ ಪರಿಚಿತರಾಗಿದ್ದರಿಂದ ಅವರಿಗೆ ನನ್ನ ಮೊಬೈಲ್ ಸಿಮ್ ನೀಡಿದ್ದೆ’ ಎಂದು ತಿಳಿಸಿದ್ದಾರೆ. ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಸಿಬಿ ಸಿಬ್ಬಂದಿ ಮೊಬೈಲ್ ಬಳಕೆ ಮಾಡಲಾಗಿದ್ದು, ಈ ಕುರಿತು ತನಿಖೆ ನಡೆಸಲು ಡಿಸಿಪಿ ಉಮಾಪ್ರಶಾಂತ್ ನೇತೃತ್ವದಲ್ಲಿ ಎಸಿಪಿ ರಾಜೇಂದ್ರ ಅವರನ್ನು ನೇಮಿಸಲಾಗಿತ್ತು.