Karavali
ಕುಂದಾಪುರ: ಬಿಜೆಪಿ ಜನರನ್ನು ಸುಳ್ಳಿನ ಸಮಾಧಿಯಲ್ಲಿ ಬಂಧಿಸಿದೆ- ಸಚಿವೆ ಡಾ. ಜಯಮಾಲಾ
- Mon, Oct 22 2018 12:17:36 PM
-
ಕುಂದಾಪುರ,ಅ 22 (MSP): ಒಂದೇ ಸುಳ್ಳನ್ನು ಸಾವಿರ ಸಲ ಹೇಳುತ್ತಾ ಅದನ್ನೇ ಸತ್ಯ ಎಂದು ಮುಗ್ಧ ಜನರಲ್ಲಿ ನಂಬಿಸುತ್ತಾ ಅಧಿಕಾರ ಗಿಟ್ಟಿಸಿಕೊಂಡ ಬಿಜೆಪಿ ನರೇಂದ್ರ ಮೋದಿಯ ನೇತೃತ್ವದಲ್ಲಿ ಜನರನ್ನು ಸುಳ್ಳಿನ ಸಮಾಧಿಯೊಳಗೆ ಬಂಧಿಸಿದೆ. ಯಾವ ಸುಳ್ಳುಗಳಿಂದ ಹುಟ್ಟಿ, ಯಾವ ಸುಳ್ಳುಗಳಿಂದ ಅಧಿಕಾರ ಪಡೆಯಿತೋ ಅದೇ ಸುಳ್ಳುಗಳೊಂದಿಗೆ ಬಿಜೆಪಿ ನೆಲಕಚ್ಚಲಿದೆ. ಆ ಮೂಲಕ ದೇಶದಲ್ಲಿ ಮುಂಬರುವ ದಿನಗಳಲ್ಲಿ ತೃತೀಯ ರಂಗ ಅಸ್ತಿತ್ವಕ್ಕೆ ಬರಲಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಹೇಳಿದ್ದಾರೆ.
ಬೈಂದೂರಿನ ರೋಟರಿ ಸಭಾಭವನದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಬೈಂದೂರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮಧ್ಯಂತರ ಚುನಾವಣೆಯ ಕಾಂಗ್ರೆಸ್ ಜೆಡಿಎಸ್ ಸಂಯುಕ್ತ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸವಾಗುತ್ತದೆ ಮಾತ್ರವಲ್ಲದೇ ರಾಜ್ಯ ಮತ್ತೆ 40 ವರ್ಷಗಳ ಹಿಂದೆ ಸಾಗುತ್ತದೆ ಎನ್ನುವ ಕಾರಣಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ಸಂಪೂರ್ಣ ತನುಮನದಿಂದ ಒಂದುಗೂಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜನ ಸೇವೆ ಮಾಡುತ್ತಿದೆ. ಅದೇ ಕಾರಣಕ್ಕೆ ಕುಮಾರಸ್ವಾಮಿಯ ನಿಕಟವರ್ತಿಯಾಗಿರುವ ಮಧು ಬಂಗಾರಪ್ಪನವರನ್ನು ಈ ಬಾರಿಯ ಚುನಾವಣೆಯಲ್ಲಿ ಆರಿಸಿ ಕಳಿಸಿದರೆ ಬೈಂದೂರು ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದರು. ಸುಳ್ಳಿನ ಮಹಾಪೂರವನ್ನೇ ಹರಿಸುತ್ತಾ ಅಧಿಕಾರ ಹಿಡಿದ ಮೋದಿ ನೇತೃತ್ವದ ಬಿಜೆಪಿ ನಮ್ಮ ಪ್ರಶ್ನೆಗೆ ಉತ್ತರಿಸಬೇಕಾಗಿದೆ, ಬೇಟಿ ಬಚಾವೋ ಯೋಜನೆ ಎಲ್ಲಿ ಅನುಷ್ಟಾನವಾಗಿದೆ. ಯಾವ ಹೆಣ್ಣುಮಕ್ಕಳನ್ನು ಬಚಾವ್ ಮಾಡಿದ್ದೀರಿ ಎಂದು ಅಂಕಿ ಅಂಶ ನೀಡಬಹುದೇ? ಅಚ್ಚೇ ದಿನ ಎಂದ ನಿಮಗೆ ಒಳ್ಳೆಯ ದಿನಗಳು ಬಂದಿರಬಹುದು ಆದರೆ ನಮ್ಮ ಕರ್ನಾಟಕಕ್ಕೇ ಇನ್ನೂ ಬಂದಿಲ್ಲ. ಏನು ಅಚ್ಚೇ ದಿನ್ ಕೊಟ್ಟಿದ್ದೀರಿ? ಎಂದು ಖಾರವಾಗಿ ಪ್ರಶ್ನಿಸಿದರು.
ವಿನಯಕುಮಾರ್ ಸೊರಕೆ ಮಾತನಾಡಿ, ಚುನಾವಣೆ ಘೋಷಣೆಯಾಗಿ ಅರ್ಧ ಘಂಟೆಯೊಳಗೆ ಅಭ್ಯರ್ಥಿ ಘೋಷಣೆ ಮಾಡ್ತಾರೆ ಅಂತಾದರೆ ಬಿಜೆಪಿ ಚುನಾವಣೆಗೆ ಎಷ್ಟು ಆಸಕ್ತಿ ಹೊಂದಿತ್ತು ಎನ್ನುವುದನ್ನು ತೋರಿಸುತ್ತದೆ. ವಂಶ ಪಾರಂಪರ್ಯದ ಬಗ್ಗೆ ಮಾತನಾಡುವ ಯಡಿಯೂರಪ್ಪ, ತನ್ನ ಸ್ಥಾನ ತುಂಬಲು ತನ್ನ ಮಗನನ್ನೇ ಯಾಕೆ ಆಯ್ಕೆ ಮಾಡಿಕೊಂಡರು. ಬಿಜೆಪಿಯಲ್ಲಿ ಯಾರೂ ಸಮರ್ಥ ಅಭ್ಯರ್ಥಿ ಇಲ್ಲವೇ ಎಂದು ಕೇಳಿದರು. ನಮ್ಮ ತೆರಿಗೆ ಹಣವನ್ನು ಉಪ ಚುನಾವಣೆಯ ಮೂಲಕ ಪೋಲು ಮಾಡಲು ಸಂಚು ರೂಪಿಸಿದ ಯಡಿಯೂರಪ್ಪನವರೇ ನೀವು ಮಾಡುತ್ತಿರುವುದು ಕುಟುಂಬ ರಾಜಕೀಯವಲ್ಲವೇ ಎಂದು ಕಿಡಿ ಕಾರಿದರು. ಅಧಿಕಾರದಾಸೆ ಯಡಿಯೂರಪ್ಪ ಅವರ ತಲೆಗೇರಿದೆ. ಒಮ್ಮೆ ಶಿಕಾರಿಪುರ ವಿಧಾನಸಭೆ, ಮತ್ತೊಮ್ಮೆ ಶಿವಮೊಗ್ಗ ಲೋಕಸಭೆ ಹೀಗೆ ನಾಲ್ಕು ಬಾರಿ ತನ್ನ ಕ್ಷೇತ್ರದಲ್ಲಿ ಉಪಚುನಾವಣೆ ನಡೆಸಿದ ಸಾಧನೆ ಯಡಿಯೂರಪ್ಪನಿಗೆ ಸಲ್ಲಬೇಕು ಎಂದು ಕಿಡಿಕಾರಿದರು.
ಇದೇ ಸಂದರ್ಭ ಮಾತನಾಡಿದ ಪ್ರಮೋದ್ ಮಧ್ವರಾಜ್, ಈ ಬಾರಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿ ಗೆದ್ದರೆ ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ದೇಶದ ರಾಜಕೀಯ ಧ್ರುವೀಕರಣಕ್ಕೆ ದಿಕ್ಸೂಚಿಯಾಗಲಿದೆ ಎಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಷ್ಟಾವಂತ ಶಾಸಕರಿಗಾದ ಅನ್ಯಾಯಕ್ಕೆ ಈ ಬಾರಿ ಮತದಾರರು ನ್ಯಾಯ ಒದಗಿಸಿಕೊಡುತ್ತಾರೆ. ಬಡವರ ಪರವಾಗಿದ್ದ ಬಂಗಾರಪ್ಪ ಅವರ ಮಗನನ್ನು ಗೆಲ್ಲಿಸುವ ಜವಾಬ್ಧಾರಿ ಎಲ್ಲರ ಮೇಲಿದೆ ಎಂದರು. ಈ ಬಾರಿ ಚುನಾವಣೆಯಲ್ಲಿ ಮಧು ಬಂಗಾರಪ್ಪ ಆಯ್ಕೆಯಾದರೆ ಕಾಂಗ್ರೆಸ್ ಜೆಡಿಎಸ್ ಗತವೈಭವ ಮರುಕಳಿಸಲಿದೆ. ಆನಸಾಮಾನ್ಯರು ನೆಮ್ಮದಿಯ ಉಸಿರು ಬಿಡಲಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆ. ಗೋಪಾಲ ಪೂಜಾರಿ, ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳನ್ನೂ ಮಾಡಿಯೂ ಯಾವುದೇ ತಪ್ಪು ಮಾಡದೆ ಸೋತಿದ್ದೇನೆ. ಈ ಬಾರಿ ಕ್ಷೇತ್ರದ ಜನರಲ್ಲಿ ಕೇಳುವುದಿಷ್ಟೇ. ದಯವಿಟ್ಟು ಆತ್ಮವಿಮರ್ಶೆ ಮಾಡಿಕೊಳ್ಳಿ. 10 ವರ್ಷ ಯಡಿಯೂರಪ್ಪ ಹಾಗೂ ರಾಘವೇಂದ್ರರಿಗೆ ಕೊಟ್ಟು ಏನಾದರೂ ಸಿಕ್ಕಿತಾ? ಮಾತೆತ್ತಿದರೆ ಕೇಂದ್ರ ಎನ್ನುವ ಅನಂತಕುಮಾರ್ ಈಗ ಎಲ್ಲಿದ್ದಾನೆ?. ತಾಕತ್ತಿದ್ದರೆ ಕೇಂದ್ರದಿಂದ ಮೀನುಗಾರರಿಗೆ ನೇರವಾಗಿ ಸೀಮೆಎಣ್ಣೆ ಒದಗಿಸಲಿ ಆಗ ಟೀಕಿಸುವುದನ್ನು ನಿಲ್ಲಿಸುತ್ತೇನೆ ಎಂದರು. ನನ್ನನ್ನು ಸೋಲಿಸಿ ಬಿಜೆಪಿ ಗೆಲ್ಲಿಸಿದ ಮತದಾರರಿಗೆ ಏನು ಸಿಕ್ಕಿತು? ಸುಕುಮಾರ ಶೆಟ್ಟಿ ಮೂರೇ ತಿಂಗಳಲ್ಲಿ ಪಕ್ಷದ ಕಾರ್ಯಕರ್ತರನ್ನೇ ನಿರ್ಲಕ್ಷಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ರಾಘವೇಂದ್ರ ಯಡಿಯೂರಪ್ಪ ರಿಯಲ್ ಎಸ್ಟೇಟ್ ವ್ಯವಹಾರವಿದ್ದರೆ ಮಾತ್ರ ಬೈಂದೂರಿಗೆ ಬರುತ್ತಾರೆ ಎಂದು ಕಿಡಿ ಕಾರಿದರು. ಕಮಲಕ್ಕೆ ವೋಟ್ ಹಾಕಿದ್ರೆ ಕ್ಷೇತ್ರ ನಾಶವಾಗುವುದರಲ್ಲಿ ಅನುಮಾನವಿಲ್ಲ ಎಂದು ಪೂಜಾರಿ, ಹಸೀ ಹಸೀ ಸುಳ್ಳುವ ಶ್ರೀನಿವಾಸ ಪೂಜಾರಿ ಒಳ್ಳೆಯ ಕಥೆಗಾರ ಎಂದು ವ್ಯಂಗ್ಯವಾಡಿದರು.
ಕೊನೆಯಲ್ಲಿ ಮಾತನಾಡಿದ ಅಭ್ಯರ್ಥಿ ಮಧು ಬಂಗಾರಪ್ಪ ದೇಶಕ್ಕೆ ಒಳ್ಳೆಯದಾಗಬೇಕು ಎನ್ನುವ ಕಾರಣಕ್ಕೆ ಕುಮಾರಸ್ವಾಮಿ ಅಧಿಕಾರ ಸ್ವೀಕಾರದ ಸಂದರ್ಭ ತೃತೀಯ ರಂಗದ ಕನಸು ಕಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಿದರೆ ಅದಕ್ಕೆ ಈ ಚುನಾವಣೆ ದಿಕ್ಸೂಚಿಯಾಗಲಿದೆ ಎಂದರು. ಸೋತರೆ ನ್ನ ಹೆಸರಿರಲಿ. ಗೆದ್ದರೆ ಅದಕ್ಕೆ ಗೋಪಾಲ ಪೂಜಾರಿ ಹೆಸರಿರಲಿ ಎಂದು ಮಧು ಬಂಗಾರಪ್ಪ, ಆಶ್ರಯ, ಆರಾಧನಾ, ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಸಂಪರ್ಕ ರಾಜ್ಯಕ್ಕೆ ನನ್ನ ತಂದೆಯ ಕೊಡುಗೆ. ಅದನ್ನು ಜನ ಮರೆತಿಲ್ಲ. ಬಂಗಾರಪ್ಪ ಚಿಂತನೆಯನ್ನು ನಾನು ಮುಂದುವರೆಸಲು ಕ್ಷೇತ್ರದ ಜನತೆ ಬೆಂಬಲಬೇಕು ಎಂದರು. ಬಂಗಾರಪ್ಪನ ಕೊನೆಯ ಸೋಲು ಅವರ ಆತ್ಮಕ್ಕೆ ಶಾಂತಿ ನೀಡಿಲ್ಲ. ನನ್ನನ್ನು ಗೆಲ್ಲಿಸುವ ಮೂಲಕ ಸೋಲಿಲ್ಲದ ಸರದಾರನ ಆತ್ಮಕ್ಕೆ ಶಾಂತಿ ನೀಡಬೇಕಿದೆ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ಧನ ತೋನ್ಸೆ, ಮಂಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ, ಭಟ್ಕಳ ಮಾಜೀ ಶಾಸಕ ಮಾಂಕಾಳ್ ವೈದ್ಯ, ಆನಂದ ಆಸ್ನೋಟಿಕರ್ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ನ ಜಿಲ್ಲಾ, ತಾಲೂಕು ಮುಖಂಡರು ಉಪಸ್ಥಿತರಿದ್ದರು. ರಾಜು ಪೂಜಾರಿ ಸ್ವಾಗತಿಸಿದರು. ಮದನ್ಕುಮಾರ್ ನಿರೂಪಿಸಿದರು. ಪ್ರಕಾಶ್ಚಂದ್ರ ಶೆಟ್ಟಿ ವಂದಿಸಿದರು.