ಮಂಗಳೂರು, ಅ 22 (MSP): ಕಳೆದ ಎಂಟು ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ಶಿಷ್ಯವೇತನವನ್ನು ನೀಡುವಂತೆ ಆಗ್ರಹಿಸಿ ವೆನ್ಲಾಕ್ ಹಾಗೂ ಲೇಡಿಗೋಷನ್ ಆಸ್ಪತ್ರೆಯ ಗೃಹ ವೈದ್ಯರು ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಅ.22 ರ ಸೋಮವಾರ ಬೆಳಗ್ಗೆ ನಗರದ ವೆನ್ಲಾಕ್ ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿದರು.
2018ರ ಮಾರ್ಚ್ ಬಳಿಕ ಸರಕಾರಿ ಕೋಟಾದಿಂದ ನೇಮಕಗೊಂಡಿರುವ 51 ಗೃಹ ವೈದ್ಯರು ಹಾಗೂ 38 ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸಿಗುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯಲ್ಲಿ ಸ್ಪಂದನೆ ಇಲ್ಲ. ಕಳೆದ 8 ತಿಂಗಳಿಂದ ಶಿಷ್ಯ ವೇತನವಿಲ್ಲ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಪ್ರತಿಭಟನಕಾರರು ಅಸಮಧಾನ ವ್ಯಕ್ತಪಡಿಸಿದರು.
ಗೃಹ ವೈದ್ಯರಿಗೆ ತಿಂಗಳಿಗೆ ರೂಪಾಯಿ 20000 ದಂತೆ ಹಾಗೂ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷ ಕ್ರಮವಾಗಿ 30,000, 35,000, 40,000 ದಂತೆ ಶಿಷ್ಯ ವೇತನ ದೊರಕುತ್ತಿತ್ತು. ಈ ಬಗ್ಗೆ ಶಿಕ್ಷಣ ಸಚಿವರಿಗೆ, ಆರೋಗ್ಯ ಸಚಿವರಿಗೆ, ಜಿಲ್ಲಾಧಿಕಾರಿ ಸಹಿತ ಸಂಬಂಧಪಟ್ಟ ಎಲ್ಲ ಇಲಾಖೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಸ್ಥಳಕ್ಕೆ ಬಂದ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ರಾಜೇಶ್ವರಿದೇವಿ ಧರಣಿ ನಿರತರ ಸಮಸ್ಯೆಯ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಲಾಗುವುದು. ಸರ್ಕಾರದಿಂದ ಶಿಷ್ಯವೇತನ ಮಂಜೂರು ಆಗಿದ್ದು ಆದರೆ ಹಣ ಬಿಡುಗಡೆಯಾಗಿಲ್ಲ. ಈ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ ಗೃಹ ವೈದ್ಯರು ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು, ಸಮಸ್ಯೆಯ ಬಗೆಹರಿಯದಿದ್ದಲ್ಲಿ ನವೆಂಬರ್ 1ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.