ಬಂಟ್ವಾಳ, ಅ 22 (MSP): ಬಿ.ಸಿ.ರೋಡ್ ನಾರಾಯಣ ಗುರು ಸರ್ಕಲ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರನ್ನು, ತಂಡವೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಐವರು ಆರೋಪಿಗಳನ್ನು ಅ. 21 ರ ಭಾನುವಾರ ಬಂಧಿಸಿದ್ದಾರೆ.
ಬಂಧಿತರನ್ನು ಮೂಡುಬಿದಿರೆ ನಿವಾಸಿಗಳಾದ ಜಿತೇಶ್(31), ವಿಕೇಶ(27), ಆಸ್ಟಿನ್(23), ಆರ್ವಿನ್(21) ಹಾಗೂ ಆಲ್ಡ್ರಿನ್(18) ಎಂದು ಗುರುತಿಸಲಾಗಿದೆ. ಬಂಟ್ವಾಳ ಟ್ರಾಫಿಕ್ ಠಾಣೆಯ ಉಪನಿರೀಕ್ಷಕರಾದ ಶ್ರೀ ಮಂಜುಳ.ಕೆ.ಎಂ. ಹಾಗೂ ಸಿಬ್ಬಂದಿಗಳು ಭಾನುವಾರದಂದು ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಪುತ್ತೂರು ಕಡೆಯಿಂದ ಆಗಮಿಸಿದ ಕಾರೊಂದನ್ನು ಅನುಮಾನದ ಮೇಲೆ ಪೊಲೀಸರು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ.
ಈ ವೇಳೆ ಕಾರಿನಲ್ಲಿದ್ದ ತಂಡ, ಎಸ್ ಐ ಹಾಗೂ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದೆ. ಅಲ್ಲದೆ ಮಹಿಳೆಯಾಗಿ ಮನೆಯಲ್ಲಿ ಅಡುಗೆ ಮಾಡುವುದು ಉತ್ತಮ ಎಂಬುವುದಾಗಿ ಅಪಹಾಸ್ಯ ಮಾಡಿದ್ದಾರೆ ಎಂದು ಟ್ರಾಫಿಕ್ ಎಸ್ ಐ ಅವರ ದೂರಿನಂತೆ ಪ್ರಕರಣ ದಾಖಲಾಗಿದೆ.
ಕರ್ತವ್ಯಕ್ಕೆ ಅಡ್ಡಿ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಅವರು ಮಾಹಿತಿ ನೀಡಿದ್ದಾರೆ.