ಕಾರ್ಕಳ,ಅ 22 (MSP): ಮದ್ಯದ ನಶೆಯಲ್ಲಿ ಸ್ನೇಹಿತನನ್ನೇ ಕೊಲೆ ಮಾಡಿದ ಘಟನೆ ಕುಕ್ಕುಂದೂರು ನಕ್ರೆ ಪರಪ್ಪು ಎಂಬಲ್ಲಿ ಅ.21ರ ಭಾನುವಾರ ರಾತ್ರಿ ನಡೆದಿದೆ. ಅಲೆಕ್ಸಾಂಡರ್ ಜಾನ್ ಡಿಮೆಲ್ಲೋ (64) ಘಟನೆಯಲ್ಲಿ ಕೊಲೆಗೀಡಾದವರು.
ಮುಂಬಯಿ ಶಿಪ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಲೆಕ್ಸಾಂಡರ್ ಜಾನ್ ಡಿಮೆಲ್ಲೋ ಪ್ರಸಕ್ತ ಪರಪ್ಪು ಪರಿಸರದ ಮನೆಯೊಂದರಲ್ಲಿ ಏಕಾಂಗಿಯಾಗಿ ವಾಸವಾಗಿದ್ದರು. ಅಲೆಕ್ಸಾಂಡರ್ ದಂಪತಿಗೆ ಮಕ್ಕಳು ಇಲ್ಲದೇ ಇರುವುದರಿಂದ ಅವರ ಪತ್ನಿ ಮೀನಾಕ್ಷಿ ಡಿಮೆಲ್ಲೋ ಮಂಗಳೂರಿನಲ್ಲಿ ಆಶ್ರಮದಲ್ಲಿ ನೆಲೆಸಿದ್ದರು. ಅವರ ಜೀವನದ ಖರ್ಚಿಗಾಗಿ ಸಂಬಂಧಿಕರು ಹಣವನ್ನು ಕಳುಹಿಸುತ್ತಿದ್ದರು.
ಮುಂಬಯಿಯಲ್ಲಿದ್ದ ಸ್ನೇಹಿತ
ಮುಂಬಯಿಯಲ್ಲಿದ್ದ ಇದ್ದಾಗ ಅಲೆಕ್ಸಾಂಡರ್ ಜಾನ್ ಡಿಮೆಲ್ಲೋನಿಗೆ ಟ್ರಾಯ್ ಹಿಲರಿ ಎಂಬ ಸ್ನೇಹಿತನೊಬ್ಬನಿದ್ದನು. ಟ್ರಾಯ್ ಹಿಲರಿ ಅಗ್ಗಿಂದಾಗೆ ಕಾರ್ಕಳಕ್ಕೆ ಬರುತ್ತಿದ್ದನಲ್ಲದೇ ಪರಪ್ಪುವಿನ ಅಲೆಕ್ಸಾಂಡರ್ ಜಾನ್ ಡಿಮೆಲ್ಲೋ ಮನೆಯಲ್ಲಿ ಹಲವು ದಿನಗಳ ಕಾಲ ತಂಗುತ್ತಿದ್ದನೆಂಬ ಮಾಹಿತಿ ತಿಳಿದುಬಂದಿದೆ. ಮನೆಗೆ ಬಂದಿದ್ದ ಸ್ನೇಹಿತ ಟ್ರಾಯ್ ಹಿಲರಿಯೊಂದಿಗೆ ಅಲೆಕ್ಸಾಂಡರ್ ಜಾನ್ ಡಿಮೆಲ್ಲೋ ಮದ್ಯ ಸೇವಿಸುತ್ತಿದ್ದುದ್ದು ಸರ್ವೇ ಸಾಮಾನ್ಯವಾಗಿತ್ತು.
ಅಮಲಿನಲ್ಲಿ ಜಗಳ
ಭಾನುವಾರ ಸಂಜೆ ಮುಂಬಯಿಯಿಂದ ಬಂದಿದ್ದ ಟ್ರಾಯ್ ಹಿಲರಿಯೊಂದಿಗೆ ಸಂಜೆ ೬ ಗಂಟೆಗೆ ಅಲೆಕ್ಸಾಂಡರ್ ಜಾನ್ ಡಿಮೆಲ್ಲೋ ಮದ್ಯ ಸೇವಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಅವರಿಬ್ಬರೊಳಗೆ ಜೋರಾಗಿ ಗಲಾಟೆ ಶಬ್ದ ಕೇಳಿಸಿರುವುದನ್ನು ಸಂಬಂಧಿ ವಿಕ್ಟರ್ ಮಥಾಯಸ್ ಖಚಿತ ಪಡಿಸಿದ್ದು, ಈ ಕುರಿತು ನಗರ ಠಾಣೆಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ. ಅದೇ ಕಾರಣ ಮುಂದಿಟ್ಟು ವಿಕ್ಟರ್ ಮಥಾಯಸ್ ಘಟನಾ ಸ್ಥಳಕ್ಕೆ ಹೋಗಿರಲಿಲ್ಲ. ರಾತ್ರಿ ೧೧ರ ವೇಳೆಗೆ ಆ ಮನೆಗೆ ತೆರಳಿ ನೋಡಿದಾಗ ಮುಂಬಾಗಿಲು ತೆರೆದುಕೊಂಡಿತ್ತಲ್ಲದೇ ಅಡುಗೆ ಕೋಣೆಯಲ್ಲಿ ಅಲೆಕ್ಸಾಂಡರ್ ಜಾನ್ ಡಿಮೆಲ್ಲೋ ಕವುಚಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ಮೃತಪಟ್ಟಿದ್ದಾರೆ.
ಕೊಲೆ ಆರೋಪಿಯೇ ಮಾಹಿತಿ ನೀಡಿದ!
ಕುಡಿದ ಅಮಲಿನನಲ್ಲಿ ಯಾವುದೋ ವಿಚಾರದಲ್ಲಿ ಅವರಿಬ್ಬರ ನಡುವೆ ವಾಗ್ವಾದ ಉಂಟಾಗಿತ್ತು. ಈ ನಡುವೆ ಚೂರಿಯಿಂದ ಹೊಟ್ಟೆಯ ಭಾಗಕ್ಕೆ ತಿವಿದು ಟ್ರಾಯ್ ಹಿಲರಿ ಅಲ್ಲಿಂದ ಪರಾರಿಯಾಗಿಯಾಗಿದ್ದಾನೆ. ಘಟನೆಯ ಬಳಿಕ ಅಲೆಕ್ಸಾಂಡರ್ ಜಾನ್ ಡಿಮೆಲ್ಲೋನ ತಮ್ಮ ವಾಲ್ಟರ್ ಡಿಮೆಲ್ಲೋ, ಪತ್ನಿ ಮೀನಾಕ್ಷಿ ಡಿಮೆಲ್ಲೋ ಇವರಿಗೆ ಆರೋಪಿ ಟ್ರಾಯ್ ಹಿಲರಿ ಫೋನ್ ಕರೆ ಮಾಡಿ ಅಲೆಕ್ಸಾಂಡರ್ ಜಾನ್ ಡಿಮೆಲ್ಲೋ ಪೆಟ್ಟಾಗಿ ಬಿದ್ದಿದ್ದಾರೆಂಬ ಮಾಹಿತಿ ನೀಡಿ ಕರೆ ಕಡಿತಕೊಳಿಸಿದ್ದಾನೆ. ಅದರ ಮೇರೆಗೆ ಅವರಿಬ್ಬರು ಅಲೆಕ್ಸಾಂಡರ್ ಜಾನ್ ಡಿಮೆಲ್ಲೋನ ಸಂಬಂಧಿ ವಿಕ್ಟರ್ ಮಥಾಯಸ್ಗೆ ಕರೆ ಮಾಡಿ ವಿಚಾರದ ಸತ್ಯ ಸತ್ಯಾತೆ ತಿಳಿದುಕೊಳ್ಳುವಂತೆ ತಿಳಿಸಿದ್ದರು.
ಸಂಜೆ 6 ಗಂಟೆಯ ಸಮಯದಲ್ಲಿ ಕೊಲೆ ಕೃತ್ಯ ಎಸಗಿ ರಾತ್ರಿ 10.30ರ ಬಳಿಕ ಅಂದರೆ ಸುಮಾರು ನಾಲ್ಕುವರೆ ಗಂಟೆ ಬಳಿಕ ಆರೋಪಿ ಟ್ರಾಯ್ ಹಿಲರಿ ತನ್ನ ತಪ್ಪನ್ನು ಮರೆ ಮಾಚುವ ಪ್ರಯತ್ನವಾಗಿ ಸಂಬಂಧಿಕರಿಗೆ ತಪ್ಪು ಮಾಹಿತಿ ನೀಡಿದ್ದ. ಮದ್ಯದ ನಶೆಯಲ್ಲಿ ಕೃತ್ಯ ಎಸಗಿ ಬಳಿಕ ತಪ್ಪನ್ನು ಮುಚ್ಚಿಹಾಕಲು ತಂತ್ರ ರೂಪಿಸಿ ಕೊಲೆ ಆರೋಪಿಯೇ ಮಾಹಿತಿ ನೀಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ಕುರಿತು ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.