ಕೊಚ್ಚಿ, ಅ22(SS): ಸಾವಿರಾರು ವರುಷಗಳ ಇತಿಹಾಸವಿರುವ ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ್ದ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾಳನ್ನು ಬಿಎಸ್ಎನ್ಎಲ್ ಉದ್ಯೋಗ ಸಂಸ್ಥೆ ವರ್ಗಾವಣೆ ಮಾಡಿದೆ.
ಶಬರಿಮಲೆಗೆ ಪ್ರವೇಶಿಸಲು ರೆಹಾನಾ ಪ್ರಯತ್ನಿಸಿದ್ದರ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು. ಕಳೆದ ಶುಕ್ರವಾರ ರೆಹಾನಾ ಮತ್ತು ಆಂಧ್ರ ಪ್ರದೇಶದ ಪತ್ರಕರ್ತೆ ಕವಿತಾ ಜಕ್ಕಾಲ್ ಶಬರಿಮಲೆಯಲ್ಲಿ ಅಯ್ಯಪ್ಪ ದರ್ಶನಕ್ಕಾಗಿ ಬಂದಿದ್ದರು. 180 ಪೊಲೀಸರ ಬಿಗಿ ಭದ್ರತೆಯಲ್ಲಿ ಇವರನ್ನು ನಡಪ್ಪಂದಲ್ ಎಂಬ ಸ್ಥಳದವರೆಗೆ ತಲುಪಿಸಲಾಗಿತ್ತು. ಆದರೆ, 18 ಮೆಟ್ಟಲುಗಳನ್ನು ಏರಿ ಅಯ್ಯಪ್ಪ ದರ್ಶನ ಪಡೆಯಲು ಇವರಿಗೆ ಸಾಧ್ಯವಾಗಿರಲಿಲ್ಲ.
ಇದೀಗ ಬಿಎಸ್ಎನ್ಎಲ್ ಕೊಚ್ಚಿ ಬೋಟ್ ಜೆಟ್ಟಿ ಶಾಖೆಯಲ್ಲಿ ಉದ್ಯೋಗಿಯಾಗಿದ್ದ ರೆಹಾನಾಳನ್ನು ರವಿಪುರಂ ಶಾಖೆಗೆ ವರ್ಗಾವಣೆ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೆಹನಾ ಫಾತಿಮಾ, ನಾನು 5 ವರ್ಷಗಳ ಹಿಂದೆಯೇ ವರ್ಗಾವಣೆ ಬೇಕು ಎಂದು ಮನವಿ ಮಾಡಿದ್ದೆ. ಶಬರಿಮಲೆ ಹತ್ತಿದ ನಂತರ ಈ ರೀತಿಯ ಆದೇಶ ಸಿಕ್ಕಿದ್ದು ಅಯ್ಯಪ್ಪನ ಅನುಗ್ರಹ. ಶಬರಿಮಲೆ ಹತ್ತಿದ ನಂತರ ಆ ಕಾರ್ಯ ಸಿದ್ಧಿಯಾಯಿತು. ಇದೆಲ್ಲವೂ ಅಯ್ಯಪ್ಪ ಸ್ವಾಮಿಯ ಅನುಗ್ರಹ. ಟ್ರಾಫಿಕ್ ಸಮಸ್ಯೆ ನಡುವೆ 6 ಕಿಮೀ ವಾಹನ ಚಲಾಯಿಸಿ ಕಚೇರಿ ತಲುಪುತ್ತಿದ್ದ ನಾನು ಇನ್ನು ಮುಂದೆ ಮನೆಯಿಂದ 2 ನಿಮಿಷ ನಡೆದುಕೊಂಡೇ ಹೋಗಬಹುದು ಎಂದು ರೆಹಾನಾ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.