ಶಿವಮೊಗ್ಗ, ಅ 22(SM): ರಾಜ್ಯದಲ್ಲಿ ಮೀಟೂ ಅಭಿಯಾನ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ, ಹೆಚ್ಚಿನ ಹವಾ ಎದ್ದಿರೋದು ಸ್ಯಾಂಡಲ್ವುಡ್ನಲ್ಲಿ. ಈ ಕುರಿತಂತೆ ಮಾಧ್ಯಮ ಪ್ರತಿನಿಧಿಗಳು ಹಿರಿಯ ನಟಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಲೋಕಸಭಾ ಉಪಚುನಾವಣೆ ಪ್ರಚಾರಕ್ಕೆ ತೆರಳಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಇದಕ್ಕೆ ಮಾಧ್ಯಮಗಳು ನೀವು ಸ್ಯಾಂಡಲ್ವುಡ್ ನಟಿ ಅಷ್ಟೇ ಅಲ್ಲದೇ ಸಚಿವರು ಆಗಿದ್ದೀರಿ. ಹೀಗಾಗಿ ಉತ್ತರ ನೀಡಬೇಕು ಎಂದು ಮರು ಪ್ರಶ್ನೆ ಕೇಳಿದ್ದಕ್ಕೆ, ಏನ್ರೀ ಅದು ಅಂತಾ ಗದರಿದರು. ನಂತರ ನನಗೆ ಗೊತ್ತಿಲ್ಲದ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ. ಗೊತ್ತಿಲ್ಲದ ವಿಷಯದ ಬಗ್ಗೆ ಮಾತನಾಡಬಾರದು ಎಂದು ಹೇಳಿಕೊಳ್ಳುವ ಮೂಲಕ ಮೀಟೂ ವಿಚಾರದಿಂದ ಸಚಿವ ತಪ್ಪಿಕೊಳ್ಳುವ ಯತ್ನ ಮಾಡಿದ್ದಾರೆ.
ನಾನು ಉಪಚುನಾವಣೆ, ಇಲಾಖೆ, ಅಂಗನವಾಡಿ ಮಕ್ಕಳ ಕಾರ್ಯಗಳ ಬಗ್ಗೆ ಮಾಹಿತಿ ಹೊಂದಿದ್ದೇನೆ. ಸಿನಿಮಾ ರಂಗದಲ್ಲಿ ಇದೀಗ ಏನು ಆಗುತ್ತಿದೆ ಅಂತಾ ನನಗೆ ಗೊತ್ತಿಲ್ಲ. ನಾನು ಪ್ರತಿಕ್ರಿಯೆ ನೀಡಲೇಬೇಕು ಅಂದರೆ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಅವರನ್ನು ಕೇಳಿ ತಿಳಿದುಕೊಂಡು, ಬಳಿಕ ನಿಮಗೆ ಹೇಳುತ್ತೇನೆ ಎಂದಿದ್ದಾರೆ.
ಶಬರಿಮಲೆಗೆ ಮಹಿಳೆಯರ ಪ್ರವೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಈ ವಿಚಾರವಾಗಿ ಕೋರ್ಟ್ ನಲ್ಲಿ ಆರೂವರೆ ವರ್ಷ ಚರ್ಚೆಯಾಗಿದೆ. ನನಗೆ ಸಂವಿಧಾನದಲ್ಲಿ ನಂಬಿಕೆ ಇದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಎಲ್ಲರೂ ಎಲ್ಲಾ ದೇವಾಲಯಗಳಿಗೂ ಹೋಗಲು ಸಾಧ್ಯವಾಗುವುದಿಲ್ಲ. ಪರಮಾತ್ಮ ಕರೆಸಿಕೊಂಡರೆ ಮಾತ್ರ ಹೋಗಲು ಸಾಧ್ಯ ಎಂದಿದ್ದಾರೆ.