ಚೆನ್ನೈ, ಅ 22(SM): ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವುದಿಲ್ಲ ಎಂದು ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ ಪಿ ಚಿದಂಬರಂ ಹೇಳಿದ್ದಾರೆ.
ರಾಹುಲ್ ಗಾಂಧಿ ಮಾತ್ರವಲ್ಲ ಪಕ್ಷದಿಂದ ಯಾವುದೇ ವ್ಯಕ್ತಿಯನ್ನು ಕೂಡ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಪಕ್ಷದಿಂದ ಬಿಂಬಿಸುವುದಿಲ್ಲ ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
ಮುಂದಿನ ವರ್ಷ ಏಪ್ರಿಲ್ ನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಯೋಜನೆಗಳನ್ನು ರೂಪಿಸುತ್ತಿದೆ. ಇದಕ್ಕೆ ಮಿಶ್ರ ಹಾಗೂ ಋಣಾತ್ಮಕ ಪ್ರತಿಕ್ರಿಯೆಗಳು ಇತರ ಪಕ್ಷಗಳಿಂದ ಬಂದಿವೆ.
ರಾಹುಲ್ ಗಾಂಧಿ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಪಕ್ಷ ಎಂದೂ ಕೂಡ ಹೇಳಿಕೊಂಡಿಲ್ಲ. ಕೆಲವು ಕಾಂಗ್ರೆಸ್ ನಾಯಕರು ಈ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಎಐಸಿಸಿ ಮಧ್ಯೆ ಪ್ರವೇಶಿಸಿ ಅಂತಹ ಹೇಳಿಕೆ ನೀಡುವುದು ನಿಲ್ಲಿಸುವಂತೆ ಸೂಚಿಸಿತ್ತು. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು, ಅದನ್ನು ಅಧಿಕಾರದಿಂದ ದೂರವಿಡುವುದೇ ನಮ್ಮ ಉದ್ದೇಶ ಎಂದಿದ್ದಾರೆ.