ಬೆಂಗಳೂರು, ಅ 23 (MSP): ಇತ್ತೀಚೆಗೆ ತಾನೆ ಜಿಮ್ ಟ್ರೈನರ್ ಮಾರುತಿಗೌಡ ಮೇಲೆ ಹಲ್ಲೆ ಪ್ರಕರಣ ಸಂಬಂಧ ಬೇಲ್ ಪಡೆದು ಜೈಲಿನಿಂದ ಹೊರಬಂದಿರುವ ವಿಜಯ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದುನಿಯಾ ವಿಜಿ ವಿರುದ್ಧ ಅವರ ಮಗಳಾದ ಮೋನಿಕಾ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾಗಿದ್ದರು ಎಂದು ಆರೋಪಿಸಿ ಈ ದೂರು ನೀಡಿದ್ದಾರೆ.
ದೂರಿನ ವಿವರ
ಅ.22 ರ ಸೋಮವಾರ ಸುಮಾರು 10- 11 ಗಂಟೆಗೆ ನಾನು ನನ್ನ ತಂದೆ ಮನೆಗೆ ಹೋಗಿ ಕೆಲವು ವೈಯಕ್ತಿಕ ವಸ್ತುಗಳನ್ನು ಹಾಗೂ ಕಾರಿನ ದಾಖಲಾತಿಗಳನ್ನು ತೆಗೆದುಕೊಳ್ಳಲು ಅಲ್ಲಿಗೆ ಹೋಗಿದ್ದೆ. ಅಲ್ಲಿ ನನ್ನ ತಂದೆ ವಿಜಯ್ , ಹಾಗೂ ಕೀರ್ತಿಗೌಡ, ಹೇಮಂತ್, ವಿನೋದ್ ಹಾಗೂ ಕಾರ್ ಡ್ರೈವರ್ ಮಹಮ್ಮದ್ ಇದ್ದರು. ನಾನು ಒಳಗೆ ಹೋಗುವಾಗ ಇವರೆಲ್ಲರೂ ಸೇರಿ ನನ್ನನ್ನು ಅವ್ಯಾಚ್ಯವಾಗಿ ನಿಂದಿಸಿ ಕೆಲವು ಮಾರಕಸ್ತ್ರಾಗಳಿಂದ ಹೊಡೆದು ಗೋಡೆಗೆ ನನ್ನ ತಲೆಯನ್ನು ಹಿಡಿದು ಹೊಡೆದಿದ್ದಾರೆ. ಸದ್ಯ ನನ್ನ ಹಣೆ ಹಾಗೂ ಬಲಗೈಗೆ ಗಾಯವಾಗಿದ್ದು, ಮೀನಾಕ್ಷಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನಗೆ ನನ್ನ ಕಾರಿನ ಕೀ ಹಾಗೂ ದಾಖಲಾತಿಗಳನ್ನು ಕೊಡಿಸಿ ಹಾಗೂ ನನ್ನ ಮೇಲೆ ಹಲ್ಲೆ ಮಾಡಿರುವವರ ಮೇಲೆ ಕ್ರಮಕೈಗೊಳ್ಳಬೇಕು. ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದೀಗ ಆರೋಪಿಗಳ ವಿರುದ್ಧ ವಿರುದ್ಧ ಐಪಿಸಿ ಸೆಕ್ಷನ್ 341, 34, 324, 323, 504 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಜಯ್ ಅವರ ಮೊದಲ ಪತ್ನಿ ನಾಗರತ್ನ, ತಂದೆಯಾಗಿ ಮಗಳಿಗೆ ತೊಂದರೆ ಕೊಟ್ಟಿದ್ದು ತಪ್ಪು, ನನ್ನ ಮಗಳು ಬಟ್ಟೆ ತರಲು ಹೋದಾಗ ಆಕೆಯನ್ನು ಕಾಲಿನಿಂದ ಒದ್ದಿದ್ದಾರೆ. ಈ ಏಟು ತಾಳಲಾರದೆ ಮಗಳು ಮೋನಿಕಾ ಅಲ್ಲೆ ಕುಸಿದು ಬಿದ್ದಿದ್ದಾಳೆ. ಸದ್ಯ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ ಎಂದಿದ್ದಾರೆ.