ನವದೆಹಲಿ,ಅ 23 (MSP): ಪಂಚ ರಾಜ್ಯಗಳ ಚುನಾವಣಾ ಕಣ ರಂಗೇರಿದ್ದು, ಈ ಚುನಾವಣೆ 2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿದೆ. ಈ ನಡುವೆ ಛತ್ತೀಸ್ಗಢದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಭಾರೀ ಸರ್ಕಸ್ ನಡೆಸುತ್ತಿದ್ದು ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸಂಬಂಧಿ ಕರುಣಾ ಶುಕ್ಲಾ ಅವರನ್ನು ಛತ್ತೀಸ್ ಗಢದ ಮುಖ್ಯಮಂತ್ರಿ - ಬಿಜೆಪಿಯ ನಾಯಕ ರಮಣ್ ಸಿಂಗ್ ವಿರುದ್ಧ ಕಾಂಗ್ರೆಸ್ ನಿಂದ ಕಣಕ್ಕಿಳಿಸುತ್ತಿದೆ.
ಈ ಬಗ್ಗೆ ಪಕ್ಷ ಪ್ರಕಟನೆ ಹೊರಡಿಸಿದ್ದು, ಛತ್ತೀಸ್ ಗಢ ವಿಧಾನಸಭೆ ಚುನಾವಣೆಯಲ್ಲಿ ರಾಜ್ ನಂದನ್ ಗಾಂವ್ ಕ್ಷೇತ್ರದಿಂದ ಕರುಣಾ ಶುಕ್ಲಾ ಸ್ಪರ್ಧೆ ಮಾಡಲಿದ್ದಾರೆ. ಎರಡನೇ ಹಂತದ ಅಭ್ಯರ್ಥಿಗಳ ಹೆಸರನ್ನ ಘೋಷಣೆ ಮಾಡಿದ್ದು ಬಿಜೆಪಿಯನ್ನ ಕಟ್ಟಿ ಹಾಕಲು ಶುಕ್ಲಾ ಅವ್ರನ್ನ ಕಣಕ್ಕಿಳಿಸುತ್ತಿದೆ. ಛತ್ತೀಸ್ ಗಢನಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತದಲ್ಲಿ ಹದಿನೆಂಟು ಸ್ಥಾನಗಳಿಗೆ ಮತದಾನ ನಡೆಯಲಿರುವ ವ್ಯಾಪ್ತಿಗೆ ರಾಜ್ ನಂದನ್ ಗಾಂವ್ ಕ್ಷೇತ್ರ ಬರುತ್ತದೆ. ಅಲ್ಲಿ ನವೆಂಬರ್ 12ರಂದು ಮತದಾನ ನಡೆಯಲಿದೆ.
ಕರುಣಾ ಶುಕ್ಲಾ ಅವರು ಮಾಜಿ ಸಂಸದೆಯಾಗಿದ್ದು, ಈ ಹಿಂದೆ ಬಿಜೆಪಿಯಲ್ಲಿದ್ದ ಅವರು ಬಳಿಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ನಂತರ 2014ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ನಿಂದ ಲೋಕಸಭಾ ಚುನಾವಣೆಗೆ ಧುಮುಕಿ ಬಿಜೆಪಿ ಅಭ್ಯರ್ಥಿಯೆದುರು ಸೋಲುಂಡಿದ್ದರು.