ಧರ್ಮಸ್ಥಳ, ಅ 23 (MSP): ಸಮಾನತೆಯ ಹೆಸರಿನಲ್ಲಿ ಶಬರಿಮಲೆಯ ಪಾರಂಪರಿಕ ಸಂಪ್ರದಾಯವನ್ನು ಹಾಳುಗೆಡವುದು ಸರಿಯಲ್ಲ .ಈ ಕಾರಣಕ್ಕಾಗಿ ಸಂಪ್ರದಾಯವನ್ನು ಪಾಲಿಸುವುದು ಒಳಿತು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟಿದ್ದಾರೆ.
ಧರ್ಮಸ್ಥಳದಲ್ಲಿ ಅ.23 ರ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವೀರೇಂದ್ರ ಹೆಗ್ಗಡೆ " ಶಬರಿಮಲೆಗೆ ಹೋಗುವ ಪ್ರತಿಯೊಬ್ಬನೂ 48 ದಿವಸಗಳ ವ್ರತ ಕೈಗೊಳ್ಳಬೇಕೆಂಬ ನಿಯಮವಿದೆ. ಭಕ್ತರು ವ್ರತ ಆಚರಣೆ ಮಾಡುವುದರ ಹಿಂದೆ ಅವರಲ್ಲಿ ಸಂಯಮವನ್ನು ಬೆಳೆಸಿಕೊಳ್ಳುವ ಉದ್ದೇಶವಿರುತ್ತದೆ.ಮನೋನಿಗ್ರಹಗಳು ಮನುಷ್ಯನಿಗೆ ಅಗತ್ಯವಾಗಿದ್ದು ಒಂದು ವೇಳೆ ಸಂಯಮ ಸಡಿಲಾದರೆ ವೃತಭಂಗವಾಗಬಹುದು. ವ್ರತ ನಿಷ್ಠರು ಮಹಿಳೆಯರು ಮಾಡಿದ ಆಹಾರವನ್ನು ಕೂಡಾ ಸ್ವೀಕರಿಸುವುದಿಲ್ಲ . ಹಲವು ಕಠಿಣ ವ್ರತಾಚರಣೆಯ ಬಳಿಕವೇ ಶಬರಿ ಮಲೆಯ ಅಯ್ಯಪ್ಪ ದರ್ಶನಕ್ಕಾಗಿ ಪ್ರಯಾಣ ಬೆಳೆಸುತ್ತಾರೆ. ಇಂತಹ ಸಂಸ್ಕೃತಿಯನ್ನು ಆಚರಿಸಿಕೊಂಡು ಬಂದರೆ ಉತ್ತಮ ಎಂದು ತಿಳಿಸಿದರು.
ಅಲ್ಲದೆ ಶಬರಿಮಲೆ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸವಿದೆ. ಅಲ್ಲದೆ ಭಕ್ತರ ವ್ರತಗಳ ವಿಶೇಷತೆಯೇ ಶಬರಿ ಮಲೆಯ ಸೌಂದರ್ಯವಾಗಿದೆ. ಅದನ್ನು ಸಮಾನತೆಯ ಹೆಸರಿನಲ್ಲಿ ಅಂದಗೆಡಿಸುವುದು ಸರಿಯಲ್ಲ ಎಂದಿದ್ದಾರೆ. ಭಕ್ತಿಯಿದ್ದರೆ ಕ್ಷೇತ್ರದಕ್ಕೆ ತೆರಳಿಯೇ ಆರಾಧನೆ ಮಾಡಬೇಕಿಲ್ಲ. ಮನೆಯಲ್ಲೂ ದೇವರ ಆರಾಧನೆ ಮಾಡಬಹುದು ಎಂದು ತಿಳಿಸಿದರು.