ಕುಂದಾಪುರ, ಅ 10(SM): ಮೀನುಗಾರರಿಗೆ ನೀಡುತ್ತಿದ್ದ ಸೀಮೆಎಣ್ಣೆ ಪೂರೈಕೆಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ. ಬಂದರು ಕಾಮಗಾರಿಗೆ ನೀಡಬೇಕಿದ್ದ ತನ್ನ ಪಾಲನ್ನು ಕೂಡ ನೀಡುತ್ತಿಲ್ಲ. ರಾಜ್ಯ ಸರಕಾರವೇ ಇದೀಗ ಎಲ್ಲಾ ಸೌಲಭ್ಯಗಳನ್ನು ಮೀನುಗಾರರಿಗೆ ಒದಗಿಸಬೇಕಾಗಿದೆ. ರಾಜ್ಯ ಸರಕಾರ ಮೀನುಗಾರರ ಹಿತ ರಕ್ಷಣೆಗೆ ಬದ್ಧವಾಗಿದೆ. ಈಗಾಗಲೇ ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಮೀನುಗಾರರ ಎಲ್ಲ ಸಮಸ್ಯೆಗಳನ್ನು, ಬೇಡಿಕೆಗಳನ್ನು ಖಂಡಿತ ಪರಿಹರಿಸಲಾಗುದು ಎಂದು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
ಮಂಗಳವಾರ ಮರವಂತೆ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿದ ಅವರು ಮೀನುಗಾರರನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಮೊದಲು ಭಾರತೀಯ ಜನತಾ ಪಕ್ಷ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಅದು ಬಡವರ, ಮೀನುಗಾರರ, ಮಧ್ಯಮವರ್ಗದವರ ಪರ ನಿಲ್ಲದೆ ಅಂಬಾನಿಯಂತಹ ಉದ್ಯಮಪತಿಗಳ ಪರ ವಹಿಸಿದೆ. ರೈತರ ಸಾಲಮನ್ನಾಕ್ಕೆ ಬಿಡಿಗಾಸನ್ನೂ ಕೊಟ್ಟಿಲ್ಲ ಎಂದು ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
‘ಪೆಟ್ರೋಲಿಯಂ ಉತ್ಪನ್ನಗಳ, ದಿನಬಳಕೆ ಸಾಮಗ್ರಿಗಳ ಬೆಲೆ ಗಗನಮುಖಿಯಾಗಿದೆ. ಮೀನುಗಾರರು ಇದನ್ನೆಲ್ಲ ಅರಿತುಕೊಂಡು ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಬೇಕು’ ಎಂದರು.
ಹಿಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ನೀಡಿದ ಯಾವ ಭರವಸೆಗಳೂ ಈಡೇರಿಲ್ಲ. ನರೇಂದ್ರ ಮೋದಿಯವರು ಹೇಳಿದ ಕಾಳಧನ ಪತ್ತೆ, ಜನರ ಖಾತೆಗೆ ಹಣ ಜಮಾವಣೆ, ಉದ್ಯೋಗ ಸೃಷ್ಟಿ, ರೈತರ ಆದಾಯ ವೃದ್ಧಿ ಇತ್ಯಾದಿ ಸುಳ್ಳಾಗಿವೆ. ಆದರೆ ಅವರು ಭಾಷಣ ಮಾಡುವುದನ್ನು ನಿಲ್ಲಿಸಿಲ್ಲ. ಅವರ ಭಾಷಣಗಳಿಂದ ದೇಶದ ಅಭಿವೃದ್ಧಿ, ಸಮಸ್ಯೆಗಳ ನಿವಾರಣೆ ಆಗದು ಎನ್ನುವುದನ್ನು ಜನ ಈಗ ತಿಳಿದುಕೊಂಡಿದ್ದಾರೆ’ ಎಂದು ಸಚಿವ ವೆಂಕಟರಾವ್ ನಾಡಗೌಡ ವ್ಯಂಗ್ಯವಾಡಿದ್ದಾರೆ.