ಜಮ್ಮು, ,ಅ 24 (MSP): ಆ ಯೋಧ ಉಗ್ರರೊಂದಿಗೆ ಹೋರಾಡಿ ವೀರಮರಣವನ್ನಪ್ಪಿದ್ದ. ಒಂದೆಡೆ ಆತನ ಅಂತ್ಯಸಂಸ್ಕಾರಕ್ಕೆ ಸಿದ್ದತೆಗಳು ನಡೆಯುತ್ತಿದ್ದರೆ ಅತ್ತ ಕಡೆ ಆ ವೀರಯೋಧನ ಮಡದಿ ಮುದ್ದಾದ ಮಗುವಿಗೆ ಜನ್ಮ ನೀಡಿದ್ದರು. 10 ವರ್ಷಗಳ ಬಳಿಕ ಆ ದಂಪತಿಗೆ ಮಗು ಹುಟ್ಟಿದ್ದು, ಆ ಸಂಭ್ರಮವನ್ನು ಸಂತೋಷಪಡುವ ಸ್ಥಿತಿಯಲ್ಲಿ ಕುಟುಂಬವಿರಲಿಲ್ಲ. ಹೆರಿಗೆಯಾದ ತಕ್ಷಣವೇ ತನ್ನ ನವಜಾತ ಶಿಶುವನ್ನು ಎದೆಗವುಚಿಗೊಂಡು ಬಂದಿದ್ದು ಆ್ಯಂಬುಲೆನ್ಸ್ನಲ್ಲಿ ಸ್ಮಶಾನಕ್ಕೆ ಬಂದಿದ್ದು, ಕಣ್ಣು ತೆರೆದ ಮಗು ನೋಡಿದ್ದು ತಂದೆಯ ಅಂತ್ಯಸಂಸ್ಕಾರವನ್ನು.ಇಂತಹ ಮನಕಲಕುವ ಘಟನೆ ನಡೆದಿದ್ದು ಸುಲಿಗಾಮ್ ಗ್ರಾಮದಲ್ಲಿ.
ಲ್ಯಾನ್ಸ್ ನಾಯಕ್ ರಂಜೀತ್ ಸಿಂಗ್ ಭುತ್ಯಾಲ್ ಮತ್ತು ಅವರ ಪತ್ನಿ ಶಿಮುದೇವಿ ವಿವಾಹವಾಗಿ ಹತ್ತು ವರ್ಷ ಕಾಲ ಮಗುವಿಗಾಗಿ ಹಂಬಲಿಸುತ್ತಾ ಕಾದಿದ್ದರು. ಇದೇ ಸಂದರ್ಭದಲ್ಲಿ ಶಿಮುದೇವಿ ಗರ್ಭಿಣಿಯಾದ ಖುಷಿ ಕುಟುಂಬವನ್ನು ಸಂತೋಷದಲ್ಲಿ ತೇಲಾಡುವಂತೆ ಮಾಡಿತ್ತು. ಪತ್ನಿಯ ಹೆರಿಗೆ ಸಲುವಾಗಿ ಅಕ್ಟೋಬರ್ 22ರಿಂದ ಭುತ್ಯಾಲ್ ರಜೆ ಪಡೆದು ಊರಿಗೆ ತೆರಳಲು ನಿರ್ಧರಿಸಿದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು. ಒಂದು ದಿನ ಮೊದಲೇ ದೇಶದ ಗಡಿ ಕಾಯುವ ಕಾಯಕದಲ್ಲಿ ಉಗ್ರರೊಡನೆ ಹೋರಾಡಿ ವೀರಮರಣವನ್ನಪ್ಪಿದರು.
ರಾಜೌರಿ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಬಳಿ ಪಾಕಿಸ್ತಾನಿ ದಾಳಿಕೋರರ ಗುಂಡಿಗೆ ಬಲಿಯಾದ ಮೂವರು ಯೋಧರರಲ್ಲಿ ಲ್ಯಾನ್ಸ್ನಾಯಕ್ ರಂಜೀತ್ ಸಿಂಗ್ ಕೂಡಾ ಒಬ್ಬರು. 36 ವರ್ಷದ ಯೋಧ ರಂಜೀತ್ರ ಪಾರ್ಥಿವ ಶರೀರ ಸೋಮವಾರ ಸುಲಿಗಾಮ್ ಗ್ರಾಮಕ್ಕೆ ಬಂದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಂಗಳವಾರ ಬೆಳಗ್ಗೆ ಇವರ ಅಂತ್ಯಸಂಸ್ಕಾರ ನಡೆಸಲು ಎಲ್ಲ ಸಿದ್ಧತೆ ನಡೆದಿತ್ತು. ಸೋಮವಾರ ಮಧ್ಯರಾತ್ರಿ ವೇಳೆಗೆ ಅವರ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಮುಂಜಾನೆ ಪತಿಯ ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಶವಾಗುವ ಕೆಲವೇ ಸಮಯದ ಮುಂಚೆ ಶಿಮುದೇವಿ ಹೆಣ್ಣುಮಗುವಿಗೆ ಜನ್ಮ ನೀಡಿದರು. ಮಗು ಹಾಗೂ ಪತ್ನಿಯನ್ನು ಆ್ಯಂಬುಲೆನ್ಸ್ನಲ್ಲಿ ಬಂದು, ಪತಿ ರಂಜೀತ್ ಸಿಂಗ್ ಅಂತಿಮ ದರ್ಶನ ಮಾಡಿದರು. ನವಜಾತ ಶಿಶುವನ್ನು ಎದೆಗಪ್ಪಿಕೊಂಡು ಕಣ್ಣೀರಿಡುತ್ತಿದ್ದ ನಿಂತಿದ್ದ ಹೃದಯ ವಿದ್ರಾವಕ ದೃಶ್ಯ ಕಲ್ಲು ಹೃದಯವನ್ನು ಕರಗಿಸುವಂತಿತ್ತು.
ಅಂತ್ಯಸಂಸ್ಕಾರದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಶಿಮುದೇವಿ, ’ ಮಡಿಲಲ್ಲಿರುವ ಈ ಪುಟ್ಟ ಕಂದ ದೊಡ್ಡವಳಾಗಿ ತಂದೆಯಂತೆ ಸೇನೆ ಸೇರಿಕೊಳ್ಳುತ್ತಾಳೆ ’ ಎಂದರು.