ಮಂಗಳೂರು,ಅ 24 (MSP): ಮಂಗಳೂರು ದಸರಾದ ಪ್ರಮುಖ ಆಕರ್ಷಣೆ, ನವದುರ್ಗೆಯ ಆರಾಧನೆ ಮತ್ತು ವೈಭವಪೂರಿತ ಶೋಭಾಯಾತ್ರೆ. ಈ ಬಾರಿಯ ದಸರಾ ಮೆರವಣಿಗೆ ಯಶಸ್ವಿಯಾಗಿ ಸಂಪನ್ನವಾಗಿದ್ದು, ದೇಶ-ವಿದೇಶದ ಲಕ್ಷಾಂತರ ಜನರ ಮನಸೂರೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಇನ್ಮುಂದೆ ಮಂಗಳೂರು ದಸರಾ ಮೆರವಣಿಗೆಯನ್ನು ಇನ್ನಷ್ಟು ಸುವ್ಯವಸ್ಥಿತವಾಗಿ ನಡೆಸುವ ಸಲುವಾಗಿ ದೇವಸ್ಥಾನದ ಆಡಳಿತ ಮಂಡಳಿ ಮೆರವಣಿಗೆ ಸ್ವರೂಪದಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದೆ.
ದೇವಸ್ಥಾನದ ಆಡಳಿತ ಮಂಡಳಿಯು ಈ ಬಾರಿಯ ದಸರಾ ಮೆರವಣಿಗೆಯನ್ನು ಕೊನೆಗೊಳಿಸಲು ಒಟ್ಟಾರೆ 12ಗಂಟೆಯ ಅವಧಿಯನ್ನು ನಿಗದಿಗೊಳಿಸಿತ್ತು. ಆದರೆ ವೈಭವದ ಶೋಭಯಾತ್ರೆ ಕೊನೆಗೊಂಡಿದ್ದು 14.30 ಗಂಟೆಯ ಅವಧಿಯಲ್ಲಿ. ಅಧಿಕ ಸಂಖ್ಯೆಯಲ್ಲಿ ಹರಿದು ಬಂದ ಜನ ಸಾಗರ ಹಾಗೂ ಟ್ಯಾಬ್ಲೋಗಳ ಒತ್ತಡದಿಂದ ಮೆರವಣಿಗೆಯನ್ನು ಯೋಜಿತ ಸಮಯದಲ್ಲಿ ಕೊನೆಗೊಳಿಸಲು ಈ ಬಾರಿಯೂ ಸಾಧ್ಯವಾಗಿಲ್ಲ. ಹೆಚ್ಚಿನ ಸಂಖ್ಯೆಯ ಟ್ಯಾಬ್ಲೋ, ವಾಹನ, ಅಪಾರಜನರನ್ನು ನಿಭಾಯಿಸುವುದೇ ಪೊಲೀಸರಿಗೆ, ಸಂಘಟಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.
ಈ ಹಿನ್ನಲೆಯಲ್ಲಿ ಮುಂದಿನ ವರ್ಷದಿಂದ ಶೋಭಾಯಾತ್ರೆ ಸ್ವರೂಪದಲ್ಲಿ ಬದಲಾವಣೆ ಮಾಡಲು ನಿರ್ಧರಿಸಲಾದ್ದು, ಮೊದಲಿಗೆ ಅಲಂಕೃತ ಬಣ್ಣದ ಕೊಡೆ, ಡೊಳ್ಳು ಕುಣಿತ ಹಾಗೂ ಇತರ ಕಲಾ ತಂಡಗಳ ಮೆರವಣಿಗೆ ಪ್ರಾರಂಭದಲ್ಲಿ ಸಾಗಲಿದೆ. ಆ ಬಳಿಕ ನವದುರ್ಗೆಯರ ಸಹಿತ ಶ್ರೀ ಶಾರದೆ ದೇವರ ಮೂರ್ತಿಗಳು ಸಾಗಲಿದೆ. ಕೊನೆಯದಾಗಿ ಟ್ಯಾಬ್ಲೋಗಳಿಗೆ ಅವಕಾಶ ನೀಡಲು ಚಿಂತಿಸಲಾಗಿದೆ. ಈ ರೀತಿಯ ಮೆರವಣಿಗೆಯನ್ನು ಆಯೋಜಿಸಿದರೆ ಶೋಭಾಯಾತ್ರೆ ಚುರುಕಿನಿಂದ ಸಾಗಿ ಬೇಗನೆ ಕೊನೆಗೊಳ್ಳುವುದು ಎನ್ನುವುದು ಆಯೋಜಕರ ನಿರ್ಧಾರವಾಗಿದೆ. ಇದಲ್ಲದೆ ಇನ್ಮುಂದೆ ಶೋಭಾಯಾತ್ರೆಯಲ್ಲಿ ಡಿಜೆ ಹಾಡು, ನೃತ್ಯ, ಎಲ್ಇಡಿ ಸ್ಕ್ರೀನ್ ಬಳಸಿದ ಟ್ಯಾಬ್ಲೋಗಳಿಗೆ ಅವಕಾಶ ನೀಡಲಾಗುವುದಿಲ್ಲ. ಸಂಸ್ಕೃತಿ,ಸಂಪ್ರದಾಯವನ್ನು ಬಿಂಬಿಸುವ ಕ್ರಿಯಾಶೀಲ ಸ್ತಬ್ದಚಿತ್ರಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.