ಮಂಜೇಶ್ವರ,ಅ 24 (MSP): ಮಂಜೇಶ್ವರ ಶಾಸಕ ಪಿ . ಬಿ ಅಬ್ದುಲ್ ರಜಾಕ್ ರವರ ನಿಧನದಿಂದ ತೆರವಾದ ಸ್ಥಾನಕ್ಕೆ ಆರು ತಿಂಗಳೊಳಗೆ ಉಪಚುನಾವಣೆ ಸಾಧ್ಯತೆ ವಿರಳ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಚುನಾವಣೆ ಆಯ್ಕೆ ಕುರಿತು ಕಾನೂನು ಹೋರಾಟ ನಡೆಯುತ್ತಿರುವುದರಿಂದ ಚುನಾವಣಾ ವಿಳಂಬಕ್ಕೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 2016 ರ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಯು.ಡಿ.ಎಫ್ ನ ಪಿ.ಬಿ ಅಬ್ದುಲ್ ರಜಾಕ್ ಬಿಜೆಪಿ ಅಭ್ಯರ್ಥಿ ಕೆ . ಸುರೇಂದ್ರನ್ ವಿರುದ್ಧ 89 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ನಕಲಿ ಮತದಾನವಾಗಿದೆ ಎಂದು ಆರೋಪಿಸಿ ಕೆ .ಸುರೇಂದ್ರನ್ ಹೈಕೋರ್ಟ್ ಮೊರೆ ಹೋಗಿದ್ದರು.
ವಿದೇಶಿದಲ್ಲಿರುವವರ ಹಾಗೂ ಮೃತಪಟ್ಟವರ ಹೆಸರಲ್ಲಿದ್ದ ಮತವನ್ನು ಚಲಾಯಿಸುವ ಮೂಲಕ ಪಿ.ಬಿ ಅಬ್ದುಲ್ ರಜಾಕ್ ಗೆಲುವು ಸಾಧಿಸಿದ್ದಾಗಿ ಸುರೇಂದ್ರನ್ ಹೈಕೋರ್ಟ್ ಗೆ ದೂರು ನೀಡಿದರು.ಈ ಬಗ್ಗೆ ವಿಚಾರಣೆ ನಡೆಯುತ್ತಿದ್ದಂತೆ ಪಿ.ಬಿ ಅಬ್ದುಲ್ ರಜಾಕ್ ರವರು ನಿಧನ ಹೊಂದಿದ್ದು, ಇದರಿಂದ ಹೈಕೋರ್ಟ್ ಅಂಗಳದಲ್ಲಿರುವ ಈ ಪ್ರಕರಣದ ಬಗ್ಗೆ ಅಂತಿಮ ತೀರ್ಪು ಬರುವ ತನಕ ಚುನಾವಣೆ ಅನಿಶ್ಚಿತತೆಗೆ ಸಿಲುಕಿಸಿದೆ.