ಬೆಂಗಳೂರು,ಅ 24 (MSP):ಮದ್ಯಪಾನ ಮಾಡಿ ತರಗತಿಗಳಿಗೆ ಹಾಜರಾಗಿದ್ದ ಫಸ್ಟ್ ಇಯರ್ ನ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಬ್ಬರು ಬಳಿಕ ಕಾಲೇಜು ಕಟ್ಟಡದಿಂದ ಧುಮುಕಿ ಕಾಲು ಮುರಿದುಕೊಂಡ ಘಟನೆ, ಸೆ.22 ರಂದು ಬೆಂಗಳೂರಿನ ಜಾಲಹಳ್ಳಿಯಲ್ಲಿಯ ಸೇಂಟ್ ಕ್ಲೆರೆಟ್ ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಾಲೇಜು ನೀಡಿದ ಮಾಹಿತಿ ಪ್ರಕಾರ ಇಬ್ಬರೂ ವಿದ್ಯಾರ್ಥಿಗಳು ಕೂಡಾ ಉತ್ತಮ ವಿದ್ಯಾರ್ಥಿಗಳಾಗಿದ್ದು ತಪ್ಪದೆ ತರಗತಿಗಳಿಗೆ ಹಾಜರಾಗುತ್ತಿದ್ದರು, ಅಲ್ಲದೆ ಈವರೆಗೂ ಒಂದೇ ಒಂದೂ ತರಗತಿಗಳನ್ನೂ ತಪ್ಪಿಸಿಕೊಳ್ಳದ ವಿದ್ಯಾರ್ಥಿಗಳಾಗಿದ್ದರು. ಆದರೆ ಸೆ.22 ರಂದು ವಿದ್ಯಾರ್ಥಿಗಳಾದ ಅಕ್ಬರ್ (19) ಹಾಗೂ ಗೌತಮ್ (20) ಪಾನಮತ್ತರಾಗಿ ಮಧ್ಯಾಹ್ನದ ತರಗತಿಗೆ ಹಾಜರಾಗಿದ್ದರು. ಇದನ್ನು ಗಮನಿಸಿದ ಇತರ ಸಹಪಾಠಿಗಳು, ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ತಕ್ಷಣ ಕಾಲೇಜು ಪ್ರಾಂಶುಪಾಲರು, ಅಕ್ಬರ್ ಹಾಗೂ ಗೌತಮ್ ಇವರಿಬ್ಬರ ಪೋಷಕರನ್ನು ಕಾಲೇಜಿಗೆ ಕರೆಸಿ ಮತ್ತೊಮ್ಮೆ ಇಂತಹ ಘಟನೆಗೆ ಮರುಕಳಿಸಬಾರದು ಎಂದು ಪೋಷಕ ಸಮ್ಮುಖದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭ ವಿದ್ಯಾರ್ಥಿ ಅಕ್ಬರ್ ತನ್ನ ಪೋಷಕರೊಂದಿಗೇ ಜಗಳವಾಡಿ ಕಾಲೇಜಿನ ಕಟ್ಟಡದ 2 ನೇ ಮಹಡಿಯಿಂದ ಕೆಳಗೆ ಧುಮುಕಿದ್ದಾನೆ. ಇದನ್ನು ತಿಳಿದ ಗೌತಮ್ ತನ್ನ ಸ್ನೇಹಿತನಂತೆಯೇ ಕೆಳಗೆ ಜಿಗಿದಿದ್ದಾನೆ. ಘಟನೆಯಲ್ಲಿ ಇಬ್ಬರೂ ವಿದ್ಯಾರ್ಥಿಗಳ ಕಾಲು ಮುರಿದಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ತನಿಖೆಗೆ ಆಸ್ಪತ್ರೆಗೆ ತೆರಳಿದ ವೇಳೆ ಪೊಲೀಸರಿಗೆ ವಿದ್ಯಾರ್ಥಿ ಅಕ್ಷರ್ ದಿನಗೂಲಿ ನೌಕರರಾಗಿದ್ದ ತನ್ನ ಪೋಷಕರಿಂದಲೇ ಕಿರುಕುಳ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಮದ್ಯವ್ಯಸನನಾಗಿದ್ದೆ ಎಂದು ಹೇಳಿದ್ದಾರೆ. ಪೋಷಕರು ನನಗೆ ಪ್ರತಿ ನಿತ್ಯ ಕೆಲಸ ಮಾಡುವಂತೆ ಒತ್ತಡ ಹೇರುತ್ತಿದ್ದರು. ಇದು ನನ್ನ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿತ್ತು, ಆದ್ದರಿಂದ ನಾನು ಮದ್ಯ ಪಾನ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದಾನೆ. ಗೌತಮ್ ನ ಪೋಷಕರೂ ಕೂಡಾ ದಿನಗೂಲಿ ನೌಕರರಾಗಿದ್ದಾರೆ.