ಕುಂದಾಪುರ,ಅ 24 (MSP): ಶಾಲೆಗೆಂದು ತೆರಳಿದ ವಿದ್ಯಾಥಿಯೊಬ್ಬ ಮನೆ ಸಮೀಪದ ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಬುಧವಾರ ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮದ ಗುಡ್ರಿ ಎಂಬಲ್ಲಿ ಬೆಳಕಿಗೆ ಬಂದಿದೆ. ಮೃತ ವಿದ್ಯಾರ್ಥಿಯನ್ನು ಸ್ಥಳೀಯ ನಿವಾಸಿ ರಾಜೀವ್ ಶೆಟ್ಟಿಯವರ ಪುತ್ರ ಹತ್ತನೇ ತರಗತಿ ವಿದ್ಯಾರ್ಥಿ ಕಿರಣ್ ಶೆಟ್ಟಿ(16) ಎಂದು ಗುರುತಿಸಲಾಗಿದೆ.
ಕಿರಣ್ ಹೆಮ್ಮಾಡಿ ಸಮೀಪದ ನೆಂಪು ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುತ್ತಿದ್ದು, ಮಂಗಳವಾರ ಬೆಳಗ್ಗೆ ಶಾಲೆಗೆಂದು ತೆರಳಿದ್ದರು. ಆದರೆ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಗಾಬರಿಗೊಂಡ ಮನೆಯವರು ಹುಡುಕಾಟ ನಡೆಸಿದರೂ ಕಿರಣ್ ಪತ್ತೆಯಾಗಿರಲಿಲ್ಲ. ಬುಧವಾರ ಬೆಳಿಗ್ಗೆ ಮತ್ತೆ ಶೋಧ ನಡೆಸಿದಾಗ ಮನೆಯ ಸಮೀಪದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದ್ದು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ತಂದೆ, ತಾಯಿ ಹಾಗೂ ಓರ್ವ ಅಕ್ಕನನ್ನು ಅಗಲಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ನಡೆಸಿದ್ದಾರೆ.