ಬಂಟ್ವಾಳ, ಅ 24 (MSP): ನೇತ್ರಾವತಿ ನದಿಯಲ್ಲಿ ನೀರಾಟವಾಡಲು ತೆರಳಿದ್ದ ವೇಳೆ ಎಎಂಆರ್ ಡ್ಯಾಂನಿಂದ ನೀರು ಬಿಟ್ಟ ಪರಿಣಾಮ ಐವರು ವಿದ್ಯಾರ್ಥಿಗಳು ಈಜಲು ಸಾಧ್ಯವಾಗದೇ ನೀರಿನ ರಭಸಕ್ಕೆ ಬಂಡೆಕಲ್ಲಿನ ಮೇಲೆ ಸಿಲುಕಿಕೊಂಡ ಘಟನೆ ತಾಲೂಕಿನ ನಾವೂರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅ.24 ರ ಬುಧವಾರ ನಡೆದಿದೆ.
ವಾಲ್ಮಿಕಿ ಜಯಂತಿ ಪ್ರಯುಕ್ತ ಗುರುವಾರ ಶಾಲೆಗೆ ರಜೆಯಿದ್ದ ಕಾರಣ ನಾವೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾವೂರ ಲಕ್ಷ್ಮೀ ವಿಷ್ಣು ಮೂರ್ತಿ ದೇವಸ್ಥಾನದ ಸಮೀಪವಿರುವ ನೇತ್ರಾವತಿ ನದಿಗೆ ಹೊರ ತಾಲೂಕಿನ 11 ಮಂದಿಯ ವಿದ್ಯಾರ್ಥಿಗಳ ತಂಡ ನೀರಾಟವಾಡಲೆಂದು ತೆರಳಿತ್ತು. ಈ ಸಂದರ್ಭ ಸಮೀಪದಲ್ಲಿರುವ ಶಂಭೂರು ಎಎಂಆರ್ ಡ್ಯಾಂನಿಂದ ಏಕಾಏಕಿ ನೀರನ್ನು ಹೊರಬಿಡಲಾಗಿತ್ತು. ನೀರಿನ ರಭಸ ಹಾಗೂ ಏಕಾಏಕಿ ನೀರಿನ ಮಟ್ಟ ಏರಿಕೆಯಾಗುವುದನ್ನು ಕಂಡ 6 ಮಂದಿ ವಿದ್ಯಾರ್ಥಿಗಳು ಈಜಿ ದಡ ಸೇರಿದರೆ, ಉಳಿದ ಐವರು ವಿದ್ಯಾರ್ಥಿಗಳ ಈಜಲು ಸಾಧ್ಯವಾಗದೇ ನದಿಯಲ್ಲಿದ್ದ ದೊಡ್ಡ ಬಂಡೆಕಲ್ಲಿನ ಮೇಲೆ ಹತ್ತಿದ್ದಾರೆ. ನದಿಯ ದಡ ಸೇರಿದ ವಿದ್ಯಾರ್ಥಿಗಳು ಸಹಾಯಕ್ಕಾಗಿ ಬೊಬ್ಬೆ ಹಾಗೂ ಕಿರುಚಾಟ ನಡೆಸಿದ್ದಾರೆ. ತಕ್ಷಣ ಇಲ್ಲಿನ ಸ್ಥಳೀಯರ ತಂಡ ನದಿಗೆ ಧುಮುಕಿ ಹಗ್ಗದ ಮೂಲಕ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ಹಾಗೂ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದೆ.ಈ ವಿದ್ಯಾರ್ಥಿಗಳು ಹೊರ ತಾಲೂಕಿನವರಾಗಿದ್ದು ಇಲ್ಲಿನ ಎಸ್ವಿಎಸ್ ಕಾಲೇಜಿಗೆ ಕ್ರೀಡಾಕೂಟಕ್ಕೆ ಬಂದವರು ಎಂದು ಹೇಳಲಾಗುತ್ತಿದೆ.ನೀರು ಬಿಡುವಾಗ ಮುಂಜಾಗ್ರತಾ ಕ್ರಮವಾಗಿ ಸೈರನ್ ಭಾರಿಸಿದೆ ಎಂದು ಶಂಭೂರು ಎಎಂಆರ್ ಡ್ಯಾಂ ಸ್ಪಷ್ಟ ಪಡಿಸಿದೆ.